ದೇಹದಾನ ಒಂದು ಮಹಾದಾನ

ಬೀದರ್:ನ.14: ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ನಲ್ಲಿ ಶ್ರೀ ಡಾ. ಮಾಂತೇಶ ರಾಮನ್ನವರ್ ಚಾರಿಟೇಬಲ್ ಟ್ರಸ್ಟ್, ಬೈಲಹೊಂಗಲ (ಜಿಲ್ಲೆ: ಬೆಳಗಾವಿ) ಇವರ ಸಹಯೋಗದಲ್ಲಿ ಮೃತದೇಹ ಸ್ವೀಕೃತಿ ಮತ್ತು ಮೃತದೇಹ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು.

ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಶ್ರೀ ಸೋಮಶೇಖರ ಹಿರೇಮಠ (ವಯಸ್ಸು 59, ಮೂಲತಃ ಹಬ್ಬಳ್ಳಿ) ಮತ್ತು ಶ್ರೀಮತಿ ಮಹಾದೇವಿ ಪಾಟೀಲ್ (ವಯಸ್ಸು 56, ಮೂಲತಃ ಹಾರುರಗೇರಿ, ಜಿ. ಬೆಳಗಾವಿ) ಇವರ ಮೃತದೇಹಗಳನ್ನು ಟ್ರಸ್ಟ್ ವತಿಯಿಂದ ದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮಾಂತೇಶ ರಾಮನ್ನವರ್ ಅವರು, “ಜೀವ ಇರುವಾಗ ರಕ್ತದಾನ, ಜೀವ ಹೋಗುವಾಗ ಅಂಗದಾನ, ಚರ್ಮದಾನ, ನೇತ್ರದಾನ ಹಾಗೂ ದೇಹದಾನ – ಇವುಗಳೆಲ್ಲ ಮಾನವೀಯ ಸೇವೆಯ ನಿಜವಾದ ರೂಪ” ಎಂದು ಹೇಳಿದರು. ನಂತರ ಅವರು ವಿದ್ಯಾರ್ಥಿಗಳಿಗೆ ದೇಹದಾನದ ವೈಜ್ಞಾನಿಕ ಹಾಗೂ ನೈತಿಕ ಮಹತ್ವದ ಕುರಿತು ಪವರ್‍ಪಾಯಿಂಟ್ ಪ್ರಸ್ತುತಿಯ ಮುಖಾಂತರ ವಿವರಿಸಿದರು.

ಕಾರ್ಯಕ್ರಮದಲ್ಲಿ ದೇಹದಾನ ಮಾಡಿದ ಬೀದರಿನ ಶ್ರೀಮತಿ ಸುಕನ್ಯಾ ವಿಠಲರಾವ್ ಹಾಗೂ ಡಾ. ಮಾಂತೇಶ ರಾಮನ್ನವರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೇಟಕಾರ, ಪ್ರಾಂಶುಪಾಲ ಡಾ. ರಾಜೇಶ್ ಪಾರಾ, ಹಾಗೂ ಹಣಕಾಸು ವ್ಯವಹಾರಾಧಿಕಾರಿ ಶ್ರೀ ಶ್ರಿಕಾಂತ ವ್ಯೆರಾಗೆ ಉಪಸ್ಥಿತರಿದ್ದು ಧನ್ಯವಾದಗಳನ್ನು ಸಲ್ಲಿಸಿದರು.

ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂದೀಪ ದೇಶಮುಖ ಅವರು ದೇಹದಾನವು ಮನುಷ್ಯನ ಅತ್ಯುನ್ನತ ಸೇವೆಯಾಗಿದೆ ಎಂದು ಶ್ಲಾಘಿಸಿ, “ಮರಣಾನಂತರ ದೇಹವನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಮಾಡುವುದು ವಿದ್ಯಾರ್ಥಿಗಳ ಅಧ್ಯಯನ ಮತ್ತು ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಸಹಕಾರಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅನಟೋಮಿ ವಿಭಾಗದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿವರ್ಗ ಭಾಗವಹಿಸಿ ಸನ್ಮಾನಿಸಲ್ಪಟ್ಟರು.