
ಶಿಡ್ಲಘಟ್ಟ.ಆ,೨೮-ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮುತ್ತೈದೆಯರಿಗೆ ತವರಿನ ಮನೆಯ ಅಣ್ಣನ ಸ್ಥಾನದಲ್ಲಿ ನಿಂತು ಸೀರೆ, ಹರಿಶಿನ ಹಾಗೂ ಕುಂಕುಮ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿದ್ದು ಮುತ್ತೈದೆಯರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು,
ಹಿಂದೂ ಸಂಪ್ರದಾಯದಂತೆ ಶ್ರಾವಣ ಮಾಸದಲ್ಲಿ ತವರಿನ ಮನೆಯವರು ಹೆಣ್ಣುಮಕ್ಕಳಿಗೆ ಹರಿಶಿನ, ಕುಂಕುಮ ಹಾಗೂ ಸೀರೆ ನೀಡಿ ಗೌರವಿಸುವ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಮಾನವ ಹಕ್ಕುಗಳ ಕಮಿಟಿಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಬೈರೇಗೌಡ,೬ ಸಾವಿರ ಮುತ್ತೈದೆಯರಿಗೆ ಹರಿಶಿನ, ಕುಂಕುಮ ಹಾಗೂ ಸೀರೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಎಂ. ಬೈರೇಗೌಡ,ಆರ್ಥಿಕವಾಗಿ ಸಬಲವಾಗಿದ್ದರೂ ಕೆಲ ತವರಿನ ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಹರಿಶಿನ-ಕುಂಕುಮ ನೀಡಲು ಸಾಧ್ಯವಾಗದಿರುವ ಸಂದರ್ಭಗಳಿವೆ. ಅಂತಹ ಹೆಣ್ಣುಮಕ್ಕಳಿಗೆ ನೋವು ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಜಿಲ್ಲೆಯಾದ್ಯಂತ ಸುಮಾರು ಆರು ಸಾವಿರ ಹೆಣ್ಣುಮಕ್ಕಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ತವರಿನ ಭಾಗ್ಯ ನೀಡುವ ಉದ್ದೇಶ ಹೊಂದಿದ್ದೇನೆ. ಯಾವುದೇ ಹೆಣ್ಣುಮಗಳು ಹರಿಶಿನ-ಕುಂಕುಮದ ಭಾಗ್ಯದಿಂದ ವಂಚಿತರಾಗಬಾರದು ಎಂಬುದು ನಮ್ಮ ಆಶಯ ಎಂದರು.
ಇದೇ ವೇಳೆ ಪ್ರತಿ ಗ್ರಾಮ ಮಟ್ಟದಲ್ಲಿ ಮಾನವ ಹಕ್ಕುಗಳ ಕಮಿಟಿಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿದ್ದು, ಈಗಾಗಲೇ ಉಚಿತ ಮನೆಗಳ ನಿರ್ಮಾಣ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಸಂಘಟನೆಯ ಸದಸ್ಯತ್ವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.
































