ರೈತರ ಉಳುಮೆಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು

ಕೋಲಾರ,ಜೂ.೩- ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಶಿಳ್ಳಂಗೆರೆ, ಹರಟಿ, ಕೋಟಿಗಾನಹಳ್ಳಿ, ಅಬ್ಬಣಿ, ಮಲ್ಲಂಡಹಳ್ಳಿ, ಅರಳಕುಂಟೆ ಗ್ರಾಮದ ರೈತರು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಡಿ.ಎಫ್.ಓ ಮತ್ತು ಆರ್.ಎಫ್.ಓ ಅಧಿಕಾರಿಗಳೊಂದಿಗೆ ಮಾತನಾಡಿದರು.


ಮಳೆಗಾಲ ಪ್ರಾರಂಭವಾಗಿ ರೈತರು ಈ ಭಾಗದಲ್ಲಿ ಉಳುಮೆ ಮಾಡುವ ಸಂದರ್ಭದಲ್ಲಿ ತಮ್ಮ ಇಲಾಖೆಯ ಸಿಬ್ಬಂದಿ ರೈತರಿಗೆ ತೊಂದರೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದರಿಂದ ಕೃಷಿ ಚಟುವಟಿಕೆಗಳನ್ನು ಮಾಡಲು ಅಡ್ಡಿಪಡಿಸಬಾರದು. ಈಗಾಗಲೇ ರೆವಿನ್ಯೂ ದಾಖಲೆಗಳನ್ನು ಪರಿಶೀಲಿಸಲಾಗಿ ಅಬ್ಬಣಿ ನೋಟಿಫೀಕೇಶನ್ ನಲ್ಲಿ ಸರ್ಕಾರ ಗೋಮಾಳ ೯೪೩ ಎಕರೆ ಜಮೀನಿದ್ದು ಅದರಲ್ಲಿ ೬೧೯ ಎಕರೆ ನೊಟೀಫಿಕೇಶನ್ ಆಗಿರುತ್ತದೆ. ಸರ್ವೇ ದಾಖಲೆಗಳಲ್ಲಿ ೨೦೨೧ ಮತ್ತು ೨೨ನೇ ಸಾಲಿನಲ್ಲಿ ರೆವಿನ್ಯೂ ಇಲಾಖೆಯಿಂದ ಮಂಜೂರ ಮಾಡಲಾಗಿದೆ.


ಕೋಲಾರ ತಾಲೂಕಿನ ವಲಯ ಅರಣ್ಯ ಅಧಿಕಾರಿಗಳು ತಪ್ಪು ಮಾಹಿತಿಯೊಂದಿಗೆ ಅರಣ್ಯ ಇಲಾಖೆಗೆ ಒಳಪಡದ ೨ ಎಕರೆ, ೩ ಎಕರೆ ಹೊಂದಿರುವ ಜಮೀನುಗಳಲ್ಲಿ ಬೆಳೆದಿರುವ ಬೆಳೆ, ಮರ, ಗಿಡ ಎಲ್ಲವನ್ನು ಧ್ವಂಸ ಮಾಡಿರುವುದು ಸಹ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ತಾವು ತೋರಿಸುತ್ತಿರುವ ಜಂಟಿ ಸರ್ವೇ ನಕ್ಷೆ ನ್ಯೂನ್ಯತೆಯಿಂದ ಕೂಡಿದೆ ಎಂದು ಎ.ಡಿ.ಎಲ್.ಆರ್ ೨೦-೦೫-೨೦೨೫ ರಂದು ಈ ಭಾಗದ ರೈತರಿಗೆ ಪತ್ರ ನೀಡಿದ್ದಾರೆ. ಹಾಗೆಯೇ ೨-೦೫-೨೦೨೫ ರಂದು ಜಂಟಿ ಸರ್ವೇ ನಡೆದಿಲ್ಲ ಎಂಬ ಪತ್ರವನ್ನು ಸಹ ನೀಡಿದ್ದಾರೆ. ಈಗಿದ್ದರೂ ಸಹ ಸಹ ೧೦೦ ವರ್ಷಗಳಿಂದ ಅನುಭವದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಜಮೀನುಗಳನ್ನು ಧ್ವಂಸ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು.


ಈಗಾಗಲೇ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್, ಮಾಲೂರು ಕೆ.ವೈ. ನಂಜೇಗೌಡರು ಅರಣ್ಯ ಸಚಿವರೊಂದಿಗೆ ಚರ್ಚಿಸಿದ್ದು ೩ ಎಕರೆಗಿಂತ ಕಡಿಮೆ ಇರುವ ರೈತರ ಜಮೀನುಗಳನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು ಎಂಬ ಆದೇಶವನ್ನು ಮಾಡಿದ್ದಾಗ್ಯೂ ಸಹ ತಾವು ತಮ್ಮ ೬೧೯ ಎಕರೆ ಜಮೀನಿನ ನಕ್ಷೆ, ದಾಖಲೆಗಳನ್ನು ಸರಿಪಡಿಸಿಕೊಳ್ಳುವುದನ್ನು ಬಿಟ್ಟು ಈ ರೀತಿ ಬಡ ರೈತರಿಗೆ ತೊಂದರೆ ನೀಡಬಾರದು. ಹಾಗೆಯೇ ಇಂದಿನಿಂದ ರೈತರು ತಮ್ಮ ಜಮೀನುಗಳಲ್ಲಿ ಉಳುಮೆಯನ್ನು ಮಾಡಿಕೊಂಡು ಬೆಳೆಯನ್ನು ಬೆಳೆದುಕೊಳ್ಳಲು ಯಾವುದೇ ರೀತಿಯ ತೊಂದರೆಯನ್ನು ಕೊಡಬಾರದೆಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅವರು ಸಹ ಇದೇ ಸಂದರ್ಭದಲ್ಲಿ ಮಾತನಾಡಿದ್ದಾರೆ.


ಈ ಸಂದರ್ಭದಲ್ಲಿ ರೈತರ ಪರವಾಗಿ ಆರ್.ಶ್ರೀನಿವಾಸನ್, ಅರವಿಂದ್ ಕಿಣಿ, ಹರಟಿ ಪ್ರಕಾಶ್, ಆನಂದ್, ವೆಂಕಟರವಣಪ್ಪ, ವೆಂಕಟೇಶಪ್ಪ ಹಾಗೂ ಇತರರು ಹಾಜರಿದ್ದರು.