ಸಂಭ್ರಮದ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ

ಕಾಳಗಿ: ಅ.5:ತಾಲೂಕಿನ ಬೆಣ್ಣೆತೋರಾ ಜಲಾಶಯ ದಂಡೆಯಲ್ಲಿರುವ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಅಪಾರ ಭಕ್ತ ಸಮೂಹದ ಮಧ್ಯೆ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶ್ರಾವಣ ಮಾಸದ ಎರಡನೇ ಸೋಮವಾರ ನಸುಕಿನ ಜಾವ 3 ಗಂಟೆಗೆ ಕನ್ನಡಗಿ ಮಲ್ಲಿಕಾರ್ಜುನ ಮೂಲ ಕರ್ತೃ ಗದ್ದುಗೆಗೆ ಅರ್ಚಕರ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ, ಮಹಾ ಮಂಗಳಾರತಿ ಜರುಗಿತು.

ಭಕ್ತರು ಸರತಿ ಸಾಲಿನಲ್ಲಿನಿಂತು ಕನ್ನಡಗಿ ಮಲ್ಲಿಕಾರ್ಜುನ ಮಹರಾಜಕೀ ಜೈ ಎಂದು ಜೈಘೋಷ ಕೂಗುತ್ತಾ ಮಲ್ಲಿಕಾರ್ಜುನ ಗದ್ದುಗೆಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು.

ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ ಹೇರೂರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಅಲಂಕೃತ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳ, ಭಜನೆ, ನಂದಿಕೋಲು, ಪುರವಂತರ ಕುಣಿತದೊಂದಿಗೆ ದೇವಸ್ಥಾನ ಸುತ್ತಲು ಭವ್ಯ ಮೆರವಣಿಗೆ ಜರುಗಿತು. ಭಕ್ತರು ‘ಕನ್ನಡಗಿ ಮಹಾರಾಜ ಕೀ ಜೈ’ ಎಂದು ಜಯಘೋಷ ಕೂಗಿದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಮಾಲಿಪಾಟೀಲ ಕನ್ನಡಗಿ, ಮುಖಂಡ ಬಸವರಾಜ ಪಾಟೀಲ ಹೇರೂರ, ದೇವಸ್ಥಾನ ಕಾರ್ಯದರ್ಶಿ ಸಿದ್ದಣ್ಣ ತಳವಾರ, ಚನ್ನವೀರಪ್ಪ ಮಾಲಿಪಾಟೀಲ, ವಿಜಯಕುಮಾರ್ ಮಾಲಿಪಾಟೀಲ, ರಾಜು ಕನ್ನಡಗಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ, ಮಲ್ಲಣ್ಣ ನಾಯಕೋಡಿ, ಶಾಂತಕುಮಾರ ಕನ್ನಡಗಿ, ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ವಕೀಲರು ಸೇರಿದಂತೆ ಕಲಬುರಗಿ, ಹೆರೂರ (ಕೆ), ನಾಗೂರ, ಶೆಳ್ಳಗಿ, ಸಾವತಖೇಡ, ಜೀವನ ಮಾರಡಗಿ, ಹೆಬ್ಬಾಳ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾಳಗಿ ಪಿಎಸ್‍ಐ ತಿಮ್ಮಯ್ಯ ಬಿಕೆ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.