
ವಿಜಯಪುರ.ಆ.೩೧-ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಜಯಪುರ ಪಟ್ಟಣದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕಲ್ಪನಾ.ಆರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು,ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಸರಕಾರ ಚಿಗುರು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಕಲಾ ಪ್ರತಿಭೆ ಇದೆ. ಇಂತಹ ವೇದಿಕೆಗಳ ಮೂಲಕ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ದೇವರಾಜು ಮಾತನಾಡಿ, ಕನ್ನಡ ನಾಡಿನ ಶ್ರೀಮಂತ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ವದ ಉದ್ದೇಶದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಪ್ರತಿವರ್ಷ ಆಯೋಜಿಸುತ್ತಿರುವ ಚಿಗುರು ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾ ಪುರ, ನೆಲಮಂಗಲ, ತಾಲೂಕುಗಳಿಂದ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ – ಕರ್ನಾಟಕ, ಹಿಂದೂಸ್ಥಾನಿ, ಗಾಯನ, ವಾದ್ಯ ಸಂಗೀತ, ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹ ನೃತ್ಯ, ನೃತ್ಯರೂಪಕ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಯಾಟ ಮತ್ತು ಏಕಪಾತ್ರಾಭಿನಯ ನಡೆಸಿಕೊಟ್ಟರು.
ಶಾಲೆಯ ಮುಖ್ಯ ಶಿಕ್ಷಕ ಮನೋಹರ್, ಇಡಗುಂಜಿ ಮಹಾಗಣಪತಿ ನೃತ್ಯ ಶಾಲೆಯ ಶಿಕ್ಷಕ ಸುಧೀರ್, ಮುಂತಾದವರು ಹಾಜರಿದ್ದರು.
































