ಪ್ರಯಾಣಿಕರ ಪರದಾಟ ಮುಗಿಯದ ಗೋಳು

ಬೆಂಗಳೂರು, ಡಿ. ೬- ಇಂಡಿಗೋ ವಿಮಾನ ಹಾರಾಟದಲ್ಲಿನ ವ್ಯತ್ಯಯ ೫ನೇ ದಿನವೂ ಮುಂದುವರೆದಿದ್ದು, ಪ್ರಯಾಣಿಕರ ಪರದಾಟಕ್ಕೆ ಕೊನೆ ಇಲ್ಲದಂತಾಗಿದೆ.
ಕಳೆದ ೫ ದಿನಗಳಿಂದ ಇಂಡಿಗೊ ವಿಮಾನ ಹಾರಾಟದಲ್ಲಿ ವ್ಯತ್ಯಯಗಳಾಗಿ ಸಾವಿರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದ್ದು, ೫ನೇ ದಿನವಾದ ಇಂದು ಸಹ ಪ್ರಯಾಣಿಕರ ಗೋಳು ಮುಂದುವರೆದಿದೆ. ಇಂಡಿಗೋ ವಿಮಾನ ಹಾರಾಟಗಳ ರದ್ದಿನಿಂದ ಪ್ರಯಾಣಿಕರು ಏರ್ಪೋಟ್‌ನಲ್ಲೇ ಉಳಿಯುವಂತಾಗಿದೆ.


ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ೮೬ ಇಂಡಿಗೋ ವಿಮಾನ, ಮುಂಬೈನಿಂದ ೧೦೯, ಪುಣೆಯಿಂದ ೪೨, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೫೦, ಹೈದರಾಬಾದ್‌ನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ೬೯ ದೇಶೀಯ ಇಂಡಿಗೋ ವಿಮಾನಗಳ ಹಾರಾಟವನ್ನು ಇಂದು ರದ್ದು ಮಾಡಲಾಗಿದೆ.


ಇಂದು ಸಹ ೫೦೦ಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ಇಂಡಿಗೋ ರದ್ದು ಮಾಡಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.
೫ ದಿನವಾದರೂ ವಿಮಾನ ಹಾರಾಟವನ್ನು ಸರಿಪಡಿಸದ ಇಂಡಿಗೋ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ.


ನಿನ್ನೆ ಸಾವಿರಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿತ್ತು. ಇಂದು ಸಹ ಸಾವಿರಕ್ಕೂ ಹೆಚ್ಚು ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ವಿವಿಧ ಸ್ಥಳಗಳಿಗೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ವಿಮಾನಗಳಿಲ್ಲದೆ ತೊಂದರೆಗೆ ಸಿಲುಕಿದ್ದಾರೆ.


ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನ ಹಾರಾಟ ವ್ಯತ್ಯಯದಿಂದಾಗಿ ಪರದಾಡುತ್ತಿರುವುದು ೫ನೇ ದಿನವಾದ ಇಂದು ಸಹ ಮುಂದುವರೆದಿದ್ದು, ವಿಮಾನಗಳಿದ್ದರೂ ಅದನ್ನು ಕಾರ್ಯಾಚರಣೆ ಮಾಡಲು ಸಿಬ್ಬಂದಿಗಳಿಲ್ಲದೆ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಹಾಗಾಗಿ ಇಂಡಿಗೋ ದೆಹಲಿ, ಬೆಂಗಳೂರು, ಲಕ್ನೋ, ಜಮ್ಮು-ಕಾಶ್ಮೀರ, ಚನ್ನೈ, ಹೈದರಾಬಾದ್, ಭೂಪಾಲ್ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಂಪೂರ್ಣವಾಗಿ ವಿಮಾನಗಳ ಹಾರಾಟ ರದ್ದು ಮಾಡಿರುವುದಾಗಿ ಇಂಡಿಗೋ ಘೋಷಣೆ ಮಾಡಿದೆ.


ವಿಮಾನಗಳಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ವಿಮಾನ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಒಳಗೆ, ಹೊರಗೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋ ಹೊರ ಹಾಕುತ್ತಿದ್ದಾರೆ.


ಕ್ಷಮೆ ಕೇಳಿದ ಸಿಇಓ


ಇಂಡಿಗೋ ಸಂಸ್ಥೆಯ ಸಿಇಓ ಪೀಠರ್ ಎಲ್ಬರ್ಡ್ಸ್ ಮತ್ತೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದು, ಡಿ. ೧೫ ರೊಳಗೆ ವಿಮಾನ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ತಿಳಿಸಿದ್ದಾರೆ.


ಕಳೆದ ಕೆಲ ದಿನಗಳಿಂದ ನಾವು ಕಾರ್ಯಾಚರಣೆಯ ಅಡೆಚಡಣೆಯನ್ನು ಅನುಭವಿಸಿದ್ದೇವೆ. ಡಿ. ೧೫ ರೊಳಗೆ ಎಲ್ಲವನ್ನು ಪರಿಹರಿಸಲಾಗುವುದು. ಸಾಮಾನ್ಯ ಸ್ಥಿತಿಯನ್ನು ಪುನರ್ ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಕ್ಷಮೆ ಕೋರುವುದಾಗಿ ಅವರು ಹೇಳಿದ್ದಾರೆ.


ಇಂಡಿಗೋ ವಿಮಾನಗಳ ಹಾರಾಟ ವ್ಯತ್ಯಯದ ಬಗ್ಗೆ ನಾಗರಿಕ ವಿಮಾನಯಾನ ಸಂಸ್ಥೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ಇಂಡಿಗೋ ವಿಮಾನಯಾನ ಸೇವೆಯನ್ನು ಸರಿದಾರಿಗೆ ತರಲು ಫೈಲಟ್‌ಗಳ ವಾರದ ವಿಶ್ರಾಂತಿಗೆ ಸಂಬಂಧಿಸಿದಂತೆ ಹೊಸ ನಿಯಮದ ಅನುಷ್ಠಾನವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ.


ಈ ಹೊಸ ನಿಯಮದಡಿ ಫೈಲಟ್‌ಗಳಿಗೆ ವಾರದ ರಜೆ ಮತ್ತು ರಾತ್ರಿ ವಿಶ್ರಾಂತಿ ಹೆಚ್ಚಿಸಬೇಕಿದ್ದು, ಈ ನಿಯಮದಿಂದ ಈಗಾಗಲೇ ಸಿಬ್ಬಂದಿ ಕೊರತೆಯಿಂದ ನಲುಗಿರುವ ಇಂಡಿಗೋ ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಈ ನಿಯಮ ಪಾಲನೆಗೆ ಫೆಬ್ರವರಿ ೧೦ರ ವರೆಗೂ ಇಂಡಿಗೋಗೆ ವಿನಾಯ್ತಿ ನೀಡಲಾಗಿದೆ.


ಬೇರೆ ವಿಮಾನಗಳ ಪ್ರಯಾಣ ದರ ಹೆಚ್ಚಳ


ಇಂಡಿಗೋ ವಿಮಾನ ಹಾರಾಟ ವ್ಯತ್ಯಯದಿಂದ ಲಾಭ ಪಡೆದಿರುವ ಇತರ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನ ಪ್ರಯಾಣ ದರಗಳ ಟಿಕೆಟ್‌ನ್ನು ಶೇ. ೧೦ಕ್ಕಿಂತ ಏರಿಕೆ ಮಾಡಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿವೆ.


ದೆಹಲಿ ಸೇರಿದಂತೆ ಬೆಂಗಳೂರಿನಿಂದ ವಿವಿಧ ಪ್ರಮುಖ ನಗರಗಳಿಗೆ ಎಕಾನಮಿ ಟಿಕೆಟ್‌ಗಳ ದರ ೫೦ ರಿಂದ ೮೦ ಸಾವಿರ ರೂ.ವರೆಗೂ ಏರಿಕೆಯಾಗಿದೆ.
ಈ ಮೊದಲು ಈ ನಗರಗಳಿಗೆ ೫ ರಿಂದ ೮ ಸಾವಿರ ರೂಪಾಯಿವರೆಗೆ ಟಿಕೆಟ್‌ಗಳು ಲಭ್ಯವಾಗುತ್ತಿದ್ದವು.