
ಕಲಬುರಗಿ, ಫೆ 22: ಸ್ಪಂದನ ಬೆಂಗಳೂರು ಕಲಾತಂಡ ಅಭಿನಯಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ್ ಕಂಬಾರರ ಮೂಲ ಕೃತಿಯ ಕರಿಮಾಯಿ ನಾಟಕ ಕಲಬುರಗಿ ನಾಟಕೋತ್ಸವ – 26 ರ ಪ್ರಾರಂಭದ ದಿನ ಜನ-ಮನ ಸೆಳೆಯಿತು.
ನಗರದ ಡಾ.ಎಸ್ ಎಮ್ ಪಂಡಿತ್ ರಂಗಮಂದಿರದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕಲಬುರಗಿ ನಾಟಕೋತ್ಸವ – 26 ಕ್ಕೆ ಚಾಲನೆ ನೀಡಿದ ನಂತರ ಹಮ್ಮಿಕೊಳ್ಳಲಾಗಿದ್ದ ಮೊದಲ ಪ್ರದರ್ಶನ ಕರಿಮಾಯಿ ನಾಟಕವನ್ನು ನಿರ್ದೇಶನ ಮಾಡಿ ಹಿನ್ನಲೆ ಮೇಳದ ಮುಖ್ಯ ಗಾಯಕರಾಗಿ ಜನರ ಮನಸೊರೆ ಮಾಡಿದರು ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಬಿ ಜಯಶ್ರೀಯವರು.
ನಾಟಕದ ಮುಖ್ಯಪಾತ್ರದಲ್ಲಿ ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆ ಖ್ಯಾತನಟ ರಮೇಶ ಪಂಡಿತ್ ಸೇರಿದಂತೆ ಹಲವಾರು ನಟ-ನಟಿಯರು ಕಿರುತೆರೆ ಸೇರಿದಂತೆ ಸಿನಿಮಾಗಳಲ್ಲಿ ಅಭಿನಯಿಸಿದ ಮುಖಗಳನ್ನು ಈ ನಾಟಕದಲ್ಲಿ ನೋಡಿದ ಕಲಬುರಗಿ ಜನರಿಗೆ ತಮ್ಮ ನೆಚ್ಚಿನ ನಟರನ್ನು ಮುಖತಃ ಭೇಟಿ ಮಾಡಿದ ಸಂತಸ ಎದ್ದು ಕಾಣುತ್ತಿತ್ತು.
ಡಾ. ಚಂದ್ರಶೇಖರ ಕಂಬಾರರ ‘ಕರಿಮಾಯಿ’ ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಲೋಕದ ಒಂದು ಅದ್ಭುತ ಸೃಷ್ಟಿ. ಇದು ಕೇವಲ ಒಂದು ನಾಟಕವಲ್ಲ, ಕರಿಮಾಯಿ ಮುಖ್ಯವಾಗಿ ಹಳ್ಳಿಗಾಡಿನ ನಂಬಿಕೆ, ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷವನ್ನು ಬಿಂಬಿಸುವ ಒಂದು ಜಾನಪದ ಮಹಾಕಾವ್ಯವಾಗಿದೆ.
’ಕರಿಮಾಯಿ’ ನಾಟಕವು ಉತ್ತರ ಕರ್ನಾಟಕದ ಜಾನಪದ ಸೊಗಡಿನೊಂದಿಗೆ ಸಾಗುತ್ತಿದೆ. ಇದು ಶಿವಪುರ ಎಂಬ ಕಾಲ್ಪನಿಕ ಗ್ರಾಮದಲ್ಲಿ ನಡೆಯುವ ಕಥೆ. ಇಲ್ಲಿನ ಜನರ ಬದುಕು ಆ ಗ್ರಾಮದ ದೇವತೆ ‘ಕರಿಮಾಯಿ’ಯ ಸುತ್ತ ಹೆಣೆದಿದೆ. ಗ್ರಾಮದ ನಂಬಿಕೆಗಳು, ಆಚರಣೆಗಳು ಮತ್ತು ಜನರ ನಡುವಿನ ಸಂಬಂಧಗಳನ್ನು ಕಂಬಾರರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಈ ನಾಟಕವು ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಜನ-ಜೀವನದ ಕನ್ನಡಿಯಾಗಿ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ.
ಸಂಪ್ರದಾಯ ಮತ್ತು ಆಧುನಿಕತೆ ಸೇರಿದಂತೆ ಹಳೆಯ ತಲೆಮಾರಿನ ನಂಬಿಕೆಗಳು ಮತ್ತು ಹೊಸ ತಲೆಮಾರಿನ ತರ್ಕಬದ್ಧ ಆಲೋಚನೆಗಳ ನಡುವಿನ ಸಂಘರ್ಷ ನಾಟಕದಲ್ಲಿ ಎದ್ದು ಕಾಣುತ್ತದೆ.
ಅಧಿಕಾರ ಮತ್ತು ರಾಜಕೀಯ ಹಳ್ಳಿ ಮುಗ್ಧ ಜನರ ನಡುವೆ ಗ್ರಾಮದ ಮುಖಂಡರ ನಡುವಿನ ಅಧಿಕಾರದ ಹಪಾಹಪಿ, ಪಿತೂರಿಗಳು ಮತ್ತು ಅದು ಸಾಮಾನ್ಯ ಜನರ ಮೇಲೆ ಬೀರುವ ಪ್ರಭಾವವನ್ನು ನಾಟಕ ಅದ್ಭುತವಾಗಿ ಕಟ್ಟಿಕೊಡುತ್ತದೆ.
ನಾಟಕದುದ್ದಕ್ಕೂ ಬರುವ ಹಾಡುಗಳು, ಲಾವಣಿಗಳು ಮತ್ತು ಗ್ರಾಮ್ಯ ಭಾμÉಯ ಬಳಕೆ ಪ್ರೇಕ್ಷಕರನ್ನು ಒಂದು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ. ಅದರಲ್ಲೂ ಬಿ ಜಯಶ್ರೀ ದ್ವನಿ ಮತ್ತು ಹಿನ್ನಲೆ ಮೇಳದ ಸಂಗೀತ ಜನರಿಗೊಂದು ಗುಂಗು ಸೃಷ್ಟಿಸುತ್ತದೆ.
ಕರಿಮಾಯಿ ದೇವತೆ ಇಲ್ಲಿ ಕೇವಲ ಕಲ್ಲಿನ ವಿಗ್ರಹವಲ್ಲ, ಅವಳೊಂದು ಗ್ರಾಮದ ಆತ್ಮಸಾಕ್ಷಿಯ ಸಂಕೇತವಾಗಿ ಕಾಣಿಸಿಕೊಳ್ಳುತ್ತಾಳೆ.
ಬಿ ಜಯಶ್ರೀಯವರ ನಿರ್ದೇಶನದ ಈ ನಾಟಕದಲ್ಲಿ ಬಯಲಾಟ ಮತ್ತು ಸಣ್ಣಾಟಗಳ ತಂತ್ರವನ್ನು ಬಳಸಿಕೊಂಡಿದ್ದಾರೆ. ಸೂತ್ರಧಾರರ ಪಾತ್ರಗಳು ಕಥೆಯನ್ನು ಮುನ್ನಡೆಸುವ ರೀತಿ ಅನನ್ಯವಾಗಿದೆ.
‘ಕರಿಮಾಯಿ’ ನಾಟಕವು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಮೌಲ್ಯಗಳು ಹೇಗೆ ಕುಸಿಯುತ್ತಿವೆ ಮತ್ತು ಮೂಲ ಬೇರುಗಳಿಂದ ಮನುಷ್ಯ ಹೇಗೆ ದೂರವಾಗುತ್ತಿದ್ದಾನೆ ಎಂಬುದನ್ನು ಕನ್ನಡಿಯಂತೆ ಹಿಡಿದು ತೋರಿಸುತ್ತದೆ.
ನಾಳೆ ಫೆ. 22 ರಂದು ಪಂಡಿತ್ ರಂಗಮಂದಿರದಲ್ಲಿ ಸಂಜೆ 7 ಗಂಟೆಗೆ ಅಜಿತೇಶ್ ಗುಪ್ತಾ ಮತ್ತು ಮೋಹಿತ್ ಅಗರ್ವಾಲ್ ನಿರ್ದೇಶನದ ‘ಜೋ ಡೂಬಾ ಸೋ ಪಾರ್’ ಹಿಂದಿ ಮತ್ತು ಉರ್ದು ಭಾμÉಯ ನಾಟಕ ಮುಂಬೈನ ಅರಣ್ಯ ಥಿಯೇಟರ್ ಗ್ರೂಪ್ ಪ್ರಸ್ತುತಪಡಿಸಲಿದೆ.
ಕಲಬುರಗಿ ನಾಟಕೋತ್ಸವ – 26 ರ ಅಂಗವಾಗಿ ಫೆ. 22 ಮತ್ತು 23 ರಂದು ಮಕ್ಕಳಿಗಾಗಿ ಕಲಬುರಗಿ ರಂಗಾಯಣದಲ್ಲಿ ರಂಗ ಶಂಕರ ನಿರ್ಮಾಣದ ಮತ್ತು ಸುರೇಂದ್ರನಾಥ ಎಸ್. ನಿರ್ದೇಶನದ ‘ಸರ್ಕಲ್ ಆಫ್ ಲೈಫ್’, ಮಾತಿಲ್ಲದ ಪಪೆಟ್ ನಾಟಕ ಇರಲಿದೆ.



























