ಜೂನ್ ತಿಂಗಳಲ್ಲಿ ಜಿಲ್ಲೆಗೆ ಎತ್ತಿನಹೊಳೆ ನೀರು: ಪರಮೇಶ್ವರ್

ಕೊರಟಗೆರೆ, ಡಿ. ೧೬- ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ೧೬೪ ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಈಗ ಮುಖ್ಯಮಂತ್ರಿ ನಿಧಿಯಿಂದ ೫೦ ಕೋಟಿ ರೂ. ಅನುದಾನ ಬಂದಿದ್ದು, ಇನ್ನೂ ಸಾಕಷ್ಟು ಅನುದಾನ ತಂದು ಕೊರಟಗೆರೆಯನ್ನು ಅಭಿವೃದ್ಧಿ ಮಾಡುತ್ತೇನೆ ಹಾಗೂ ೨೦೨೬ರ ಜೂನ್‌ನಲ್ಲಿ ಎತ್ತಿನಹೊಳೆ ನೀರು ತುಮಕೂರು ಜಿಲ್ಲೆಗೆ ಹರಿಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.


ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದ ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ರೈತರಿಗೆ ಭೂ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಮೂರು ಬಾರಿ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳ ರಕ್ಷಣೆ, ಮಕ್ಕಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಸರ್ಕಾರಿ ಆಸ್ತಿ ರಕ್ಷಣೆ, ಮಾಡುವುದು ನಮ್ಮ ರಕ್ಷಣೆ ಆಗಿದ್ದು, ರಾಜ್ಯ ಪ್ರವಾಸದಿಂದ ಕ್ಷೇತ್ರದ ಬೇಟಿ ತಡವಾಗುತ್ತಿದ್ದು ಅದರೂ ಕೆಲಸದ ಒತ್ತಡವಿದ್ದರೂ ಅದರ ಜತೆಗೆ ಕೊರಟಗೆರೆ ಜನತೆಯನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಕೇಂದ್ರ ಸರ್ಕಾರಿಂದ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ೩೦ ಕೋಟಿ ರೂ. ಅನುದಾನ ಬಂದಿದ್ದು ಆ ಕೆಲಸಗಳನ್ನು ಪ್ರಾರಂಭ ಮಾಡಲು ತಿಳಿಸಿದ್ದೇನೆ ಎಂದರು.


ನಮ್ಮ ಕೊರಟಗೆರೆ ಕ್ಷೇತ್ರದಲ್ಲಿ ಬಹು ಕೋಟಿ ಅನುದಾನದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಬರದಿಂದ ಸಾಗುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಹಾಸನ ಕುಡಿಯುವ ನೀರಿಗೆ ತೊಂದರೆ ಆಗುತ್ತಿತ್ತು.. ತುಮಕೂರು ಜಿಲ್ಲೆಯಲ್ಲಿ ೨ ಸಾವಿರ ಅಡಿ ಬೋರ್‌ವೆಲ್ ಕೊರೆಸಿದರು ನೀರು ಸಿಗುತ್ತಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನ ಊರು ಬಿಡುತ್ತಿದ್ದಾರೆ. ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿದಂತೆ ಹೋರಾಟ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆ ಜಾರಿಗೆ ತಂದರು ಎಂದರು.


ಮಳೆಗಾಲದಲ್ಲಿ ಸಕಲೇಶಪುರದಲ್ಲಿ ಇರುವ ಎತ್ತಿನಹೊಳೆ ಜಾಗದಲ್ಲಿ ೨೪ ಟಿಎಂಸಿ ನೀರು ಸಂಗ್ರಹವಾಗುತಿತ್ತು. ಆ ನೀರನ್ನು ಅರಸೀಕೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರಿಗಾಗಿ ಯೋಜನೆ ಜಾರಿಗೆ ತಂದು ಬಜೆಟ್‌ನಲ್ಲಿ ೧೩.೫೦೦ ಕೋಟಿ ಹಣ ಬಿಡುಗಡೆ ಮಾಡಿದ್ದರು. ವರ್ಷದಿಂದ ವರ್ಷಕ್ಕೆ ಶೇ.೧೫ ರಷ್ಟು ವೆಚ್ಚ ಹೆಚ್ಚಾಗುತ್ತಿದ್ದು ಪ್ರಸ್ತುತ ೨೩ ಸಾವಿರ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ ಅವರು, ತುಮಕೂರು ಜಿಲ್ಲೆಯಲ್ಲಿ ೩ ಸಾವಿರ ಎಕರೆ ಭೂಮಿ ಎತ್ತಿನಹೊಳೆ ಯೋಜನೆಗೆ ತೆಗೆದುಕೊಳ್ಳಲಾಗಿದೆ. ೧ ಸಾವಿರ ಕೋಟಿ ಹಣ ರೈತರಿಗೆ ನೀಡಬೇಕಾಗಿದೆ. ಇದರಲ್ಲಿ ೮೪೦ ಕೋಟಿ ನೀಡಲಾಗಿದೆ ಇನ್ನೂ ೮೦ ಕೋಟಿ ಬಾಕಿ ಇದೆ. ೫೮ ಜನ ರೈತರಿಗೆ ೨೨ ಎಕರೆ ಭೂಮಿಗೆ ೫ ಕೋಟಿ ೫೩ ಲಕ್ಷ ಹಣದ ಚೆಕ್ ನಮ್ಮ ರೈತರಿಗೆ ನೀಡಲಾಗಿದೆ ಎಂದರು.


೨೦೨೬ರ ಜೂನ್‌ನಲ್ಲಿ ಎತ್ತಿನಹೊಳೆ ನೀರು ನಮ್ಮ ತುಮಕೂರು ಜಿಲ್ಲೆಗೆ ಹರಿಯಲಿದೆ. ನಮ್ಮ ತಾಲ್ಲೂಕಿನ ಬೈರಗೊಂಡ್ಲು ಸಮೀಪ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಅದರಲ್ಲೂ ರಾಜಕಾರಣ ಮಾಡಲು ಬಂದರೂ ನಮ್ಮ ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಯೋಜನೆ ಬದಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಎರಡು ಬಫರ್ ಡ್ಯಾಂ ಮಾಡಿ ನೀರು ಶೇಖರಣೆ ಮಾಡಲಿದ್ದಾರೆ. ಇದೆ ಡ್ಯಾಂ ನಮ್ಮ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಿದರೆ ತಾಲ್ಲೂಕಿನ ೩ ಹೋಬಳಿಗಳಲ್ಲಿ ಅಂರ್ತಜಲ ವೃದ್ಧಿಯಾಗುತಿತ್ತು. ಅದಕ್ಕೆ ೭೦ ಕೆರಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ.


ಇತ್ತೀಚಿಗೆ ಕಬ್ಬಿನ ಬೆಳೆ ಹೆಚ್ಚಳಕ್ಕೆ ರೈತರು ಹೋರಾಟ ಮಾಡಿದರು. ಕೇಂದ್ರ ಸರ್ಕಾರ ಮಾಡಬೇಕಾದ ಹೆಚ್ಚಳ ಅದು, ೩೩೦೦ ಟನ್ ೩೩೦೦ ರೂ ನಿಗದಿ ಮಾಡಬೇಕಿತ್ತು. ಅದರೆ ನಮ್ಮ ರೈತರು ಉಳಿಬೇಕು ಎಂದು ಅವರ ನೆರವಿಗೆ ಹೋಗಿದ್ದೇವೆ. ಅದರಂತೆ ೧೫೦ ರೂ ಹೆಚ್ಚು ನಮ್ಮ ಸರ್ಕಾರ ನೀಡಲಾಗುತ್ತಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದರು.


ನಾನು ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ತುಮಕೂರಿಗೆ ವಿಶ್ವವಿದ್ಯಾನಿಲಯ ತಂದಿದ್ದೇನೆ. ಇತ್ತೀಚೆಗೆ ಅದರೊಳಗೆ ಕ್ಯಾಂಪಸ್ ಉದ್ಘಾಟನೆ ಮಾಡಲಾಗಿದೆ. ೨೦೦ ಎಕರೆ ಜಾಗದಲ್ಲಿ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳು ಅಂಕ ಪಡೆಯುವುದರ ಜತೆಗೆ ಸಾಮಾನ್ಯ ಜ್ಞಾನ ಕೂಡಾ ಬೆಳಸಿಕೊಳ್ಳಬೇಕು. ಕೊರಟಗೆರೆಯಿಂದ ಇಬ್ಬರು ಐಎಎಸ್ ಅಧಿಕಾರಿಯಾಗಿ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನೀವು ಕೂಡ ಅವರಂತೆ ಉತ್ತಮ ಸ್ಥಾನಕ್ಕೆ ಬಂದು ಕೊರಟಗೆರೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳೀಗೆ ಕಿವಿ ಮಾತು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಆಶೋಕ್, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಎಸಿ ಕೊಟ್ಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಶ್ವಥ್‌ನಾರಾಯಣ್, ಅರಕೆರೆಶಂಕರ್, ಜಯಮ್ಮ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ್, ಕೆಪಿಸಿಸಿ ಸದಸ್ಯರಾದ ಎ.ಡಿ.ಬಲರಾಮಯ್ಯ, ದಿನೇಶ್, ಮುಖಂಡರಾದ, ಮಹಾಲಿಂಗಪ್ಪ, ಕವಿತಮ್ಮ, ಲಕ್ಷ್ಮಿ, ವೆಂಕಟೇಶ್, ಹನುಮಾನ್, ಓಬಳರಾಜು, ನಂದೀಶ್, ಲಕ್ಷ್ಮಿನಾರಾಯಣ್, ಪುಟ್ಟನರಸಪ್ಪ, ಎಲ್.ರಾಜಣ್ಣ, ಮಹೇಶ್, ವಿನಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.