ಧಾರವಾಡ,ನ.೧೩: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಜನಪರ ಕಾರ್ಯಕ್ರಮಗಳನ್ನು ಹಾಗೂ ಕಲ್ಯಾಣ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಧಾರವಾಡ ಜಿಲ್ಲೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಇದಕ್ಕೆ ನಮ್ಮ ಜಿಲ್ಲೆಯ ಎಲ್ಲ ಸರ್ಕಾರಿ ನೌಕರರ ಸಕ್ರೀಯ ಪಾಲ್ಗೋಳ್ಳುವಿಕೆ ಮತ್ತು ಅನುಷ್ಠಾನದಲ್ಲಿನ ಬದ್ಧತೆ ಕಾರಣವಾಗಿದೆ. ಆದ್ದರಿಂದ ಸರ್ಕಾರಿ ನೌಕರರ ಎಲ್ಲ ಬೇಕು ಬೇಡಿಕೆಗಳಿಗೆ ಜಿಲ್ಲಾಡಳಿತವು ಸದಾ ಕಾಲಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ವೃತ್ತಿಯಲ್ಲಿ ವಿಶೇಷ ಕೌಶಲ್ಯ ಹಾಗೂ ನೈಪುಣ್ಯತೆಯನ್ನು ಪಡೆಯಲು ಕಾಲಕಾಲಕ್ಕೆ ಅಗತ್ಯ ತರಬೇತಿಗಳು ನೀಡುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಘಟಕ ಸಂಯುಕ್ತವಾಗಿ, ಎಚ್.ಆರ್.ಎಂ.ಎಸ್ -೨, ಇಎಸ್‌ಆರ್ ಮತ್ತು ಕೆಎಸ್‌ಎಸ್ ಯೋಜನೆ ಕುರಿತು ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳ ಡಿಡಿಓ, ಇಎಸ್‌ಟಿ, ಅಧಿಕಾರಿಗಳಿಗೆ, ಪದಾಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಇತ್ತೀಚೆಗೆ ಜಿಲ್ಲೆಯಲ್ಲಿ ಕೈಗೊಂಡ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮತ್ತು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನೌಕರರಿಗೆ ಗೌರವ ಧನ ನೀಡಲು ಸರ್ಕಾರದಿಂದ ಈಗಾಗಲೇ ಜಿಲ್ಲೆಗೆ ಸುಮಾರು ರೂ. ೭ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆಯಾ ತಹಶೀಲ್ದಾರಗಳಿಗೆ ಸಮೀಕ್ಷೆ ಕೈಗೊಂಡ ಸಿಬ್ಬಂದಿಗಳಿಗೆ ಗೌರವಧನ ಬಿಡುಗಡೆ ಮಾಡಲು ಸೂಚಿಸಲಾಗಿದೆ ಎಂದರು.
ಸಮೀಕ್ಷೆಯ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತ ಹಾಗೂ ಅವಘಡಗಳಿಗೆ ಒಳಗಾಗಿ ಅನಾರೋಗ್ಯ ಪಿಡಿತರಾದ ಸಿಬ್ಬಂದಿಗಳಿಗೆ ರಜೆ ಹಾಗೂ ವೈಧ್ಯಕೀಯ ವೆಚ್ಚ ನೀಡಲು ಶಿಕ್ಷಕರ ಪ್ರತಿನಿಧಿಗಳು ಜಿಲ್ಲಾಡಳಿತಕ್ಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಕೆಸಿಎಸ್‌ಆರ್ ನಿಯಮಾವಳಿ ಪ್ರಕಾರ ತಕ್ಷಣ ವಿಶೇಷ ರಜೆ ಮಂಜೂರು ಮಾಡಿ, ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿಗಳಿಗೆ ಅನುಕೂಲ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ. ಅವರು ರಜೆ ಮಂಜೂರು ಮಾಡಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಮತ್ತು ಅನಾರೋಗ್ಯ ಪಡಿತರ ವೈಧ್ಯಕೀಯ ವೆಚ್ಚದ ಬಿಲ್ಲಗಳನ್ನು ತಕ್ಷಣ ಹೊಂದಾಣಿಕೆ ಮಾಡಿ, ಅವರಿಗೆ ಮರುಪಾವತಿ ಆಗುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗೆ ಮತ್ತು ಡಿಡಿಪಿಐ ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಆರೋಗ್ಯ ರಕ್ಷಣೆಗಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಯಡಿ ಈಗಾಗಲೇ ಜಿಲ್ಲೆಯ ವಿಶೇಷವಾಗಿ ಹುಬ್ಬಳ್ಳಿಯ ೧೩ ಆಸ್ಪತ್ರೆಗಳು ನೋಂದಣಿಯಾಗಿವೆ. ಮತ್ತು ಐದು ಆಸ್ಪತ್ರೆಗಳು ನೋಂದಣಿಯಾಗಲು ಒಪ್ಪಿಗೆ ನೀಡಿವೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ಕುಟುಂಬ ಸದಸ್ಯರು ಅವಳಿ ನಗರದಲ್ಲಿ ವಾಸಿಸುತ್ತಿರುವದರಿಂದ ಮತ್ತು ಧಾರವಾಡ ಹುಬ್ಬಳ್ಳಿ ನಗರಗಳಲ್ಲಿ ಹೆಚ್ಚು ಸೌಲಭ್ಯ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಆಸ್ಪತ್ರೆಗಳಿರುವದರಿಂದ ಆರೋಗ್ಯ ಸಂಜೀವಿನಿ ಯೋಜನೆಯಡಿ ಒಳಪಡುವುದು ಅಗತ್ಯವಿದೆ. ಈಗಾಗಲೇ ತಾವು ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಆರೋಗ್ಯ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲಿಸಲಾಗಿದೆ. ಮುಂದಿನ ವಾರದಲ್ಲಿ ಧಾರವಾಡ ನಗರದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಹಾಗೂ ಧಾರವಾಡದ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಜಿಲ್ಲಾಡಳಿತ ಸಭೆ ಜರುಗಿಸಿ, ಮಾಹಿತಿ ನೀಡಿ ಹೆಚ್ಚಿನ ಆಸ್ಪತ್ರೆಗಳು ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡುವಂತೆ ಕ್ರಮವಹಿಸಲಾಗುವುದು. ಸರ್ಕಾರಿ ನೌಕರರ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗಿರುವದರಿಂದ ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿಯಿಂದ ಕಾರ್ಯ ಮಾಡಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ಜಿಲ್ಲಾ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿರುವ ಕಲಘಟಗಿ ಸರ್ಕಾರಿ ನೌಕರರ ಸಂಘದ ಮಾಜಿ ತಾಲೂಕಾ ಅಧ್ಯಕ್ಷ ರಮೇಶ ಎಮ್. ಹೋಲ್ತಿಕೊಟಿ ಅವರನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಡಿಓ, ಮತ್ತು ಇಎಸ್‌ಟಿ ಸಿಬ್ಬಂದಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

























