ಕೇಂದ್ರ ತಂಡಕ್ಕೆ ಮಳೆ ಹಾನಿಯ ತೀವ್ರತೆಯನ್ನು ಮನವರಿಕೆ ಮಾಡಿಸಿದ ಜಿಲ್ಲಾಡಳಿತ

ಬೀದರ, ಜ.13: ಕಳೆದ ಮುಂಗಾರು ಹಂಗಾಮಿನಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ಸಂಭವಿಸಿದ ಬೆಳೆ ಹಾಗೂ ಮೂಲಭೂತ ಸೌಕರ್ಯಗಳ ಹಾನಿಯ ಕುರಿತು ಇಂದು ಬೀದರ ಜಿಲ್ಲೆಗೆ ಭೇಟಿ ನೀಡಿದ ಕೇಂದ್ರ ಸರ್ಕಾರದ ತಂಡಕ್ಕೆ ಜಿಲ್ಲಾಡಳಿತ ಮನವರಿಕೆ ಮಾಡಿಕೊಡಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಈ ಕುರಿತು ಜರುಗಿದ ಸಭೆಯಲ್ಲಿ ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ನೇತೃತ್ವದ ತಂಡವು ಇಂದು ಬೀದರನಲ್ಲಿ ಮುಂಗಾರು ಪ್ರವಾಹದ ಹಾನಿ ಕುರಿತಾದ ಮಾಹಿತಿಯನ್ನು ಪಡೆದರು. ಕೇಂದ್ರ ಸರಕಾರದ ಕೃಷಿ ಹಾಗೂ ಎಣ್ಣೆ ಕಾಳು ಅಭಿವೃದ್ಧಿ ನಿಗಮದ ನಿರ್ದೇಶಕರಾದ ಡಾ.ಪೆÇನ್ನುಸ್ವಾಮಿ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಜಯಶ್ರೀ ಕಕ್ಕರ್ ಉಪಸ್ಥಿತರಿದ್ದರು.
ರಾಜ್ಯ ಸರಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಾಣಾ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಕೇಂದ್ರ ತಂಡಕ್ಕೆ ಮುಂಗಾರು ಮಳೆಯಿಂದಾದ ಹಾನಿಯ ತೀವೃತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಆರಂಭದಲ್ಲಿ ಕೇಂದ್ರ ತಂಡದ ಜೊತೆ ವಿಡಿಯೋ ಸಂವಾದದ ಮೂಲಕ ಮಾತನಾಡಿದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೆಗೌಡ ಅವರು ಇಡೀ ರಾಜ್ಯದಲ್ಲಾದ ಒಟ್ಟಾರೆ ಹಾನಿಯ ಸಮೀಕ್ಷಾ ವರದಿ ಹಾಗೂ ಪ್ರಸ್ತಾವನೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಆಧುನಿಕ ತಂತ್ರಜ್ಞಾನ ಬಳಸಿ ಹಾನಿಯ ವರದಿಯನ್ನು ಆಯಾ ಜಿಲ್ಲೆಗಳು ಸಿದ್ಧಪಡಿಸಿವೆ. ಅಗತ್ಯ ಛಾಯಾಚಿತ್ರ ಹಾಗೂ ಪತ್ರಿಕಾ ವರದಿಗಳನ್ನು ಮಂಡಿಸಲಾಗಿದೆಯೆಂದರು.
ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ರಾಜ್ಯದ ಕಲ್ಯಾಣ ಕರ್ನಾಟಕದಲ್ಲಾದ ಹೆಚ್ಚಿನ ಮಳೆ ಹಾಗೂ ಹಾನಿಯ ಬಗ್ಗೆ ತಂತ್ರಜ್ಞಾನ ಬಳಸಿ ಸಿದ್ದಪಡಿಸಿದ ವರದಿ ಹಾಗೂ ಅಗತ್ಯ ಅನುದಾನದ ಬೇಡಿಕೆ ಬಗ್ಗೆ ತಿಳಿಸಿದರು. ಬದಲಾದ ಹವಾಮಾನ ವೈಪರಿತ್ಯದ ಪರಿಣಾಮದಿಂದ ಕಳೆದ ರಾಜ್ಯಾದ್ಯಂತ ಸತತ ಪ್ರವಾಹ ಹಾಗೂ ಬರಗಾಲ ಸಂಭವಿಸುತ್ತಿದೆ. 125 ವರ್ಷಗಳ ಇತಿಹಾಸದಲ್ಲಿ ಮೇ.2025 ರಲ್ಲಿ ದಾಖಲೆಯ ಮಳೆಯಾಗಿ ಜಲಾಶಯ ಕೆರೆ, ಹಳ್ಳ ಕೊಳ್ಳ ತುಂಬಿ, ಬಹುತೇಕ ಎಲ್ಲ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳು ನಾಶಗೊಂಡು ಸಾಕಷ್ಟು ಮೂಲಭೂತ ಸೌಕರ್ಯಗಳ ಹಾನಿಯಾಗಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೇ.90% ಬೆಳೆ ಹಾನಿ ಸಂಭವಿಸಿದೆಯೆಂದು ಕೇಂದ್ರ ತಂಡಕ್ಕೆ ಅಂಕಿ ಸಂಖ್ಯೆಗಳ ಸಮೇತ ಮಾಹಿತಿ ನೀಡಿದರು. ಆಧುನಿಕ ತಂತ್ರಜ್ಞಾನ ಮೊಬೈಲ್ ಆಪ್ ಬಳಸಿ ಹಾನಿಯ ವರದಿ ಸಿದ್ದಪಡಿಸಲಾಗಿದೆ ಎಂದು ತಿಳಿಸಿದರು.
ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಸೇರಿ ಪ್ರತಿ ಗ್ರಾಮದ ಪ್ರತಿ ಜಮೀನಿಗೆ ಸರ್ವೆ ನಂಬರವಾರು ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗಿದೆ. ಪರಿಹಾರ ಆಪ್‍ನಲ್ಲಿ ವಿವರಗಳನ್ನು ದಾಖಲಿಸಿದೆ. ಪ್ರತಿ ರೈತರಿಗೆ ಆಧಾರ ಲಿಂಕ ಕಡ್ಡಾಯಗೊಳಿಸಿದ ಕಾರಣ ಪರಿಹಾರವು ನೇರವಾಗಿ ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು.
ಕೇಂದ್ರ ಸರಕಾರದ ಪುನರ್ ನಿರ್ಮಾಣದ ನಿಯಮಾವಳಿಯಂತೆ ಮೂಲಭೂತ ಸೌಕರ್ಯಗಳ ಹಾನಿಯ ವರದಿಯನ್ನು ಸಿದ್ಧಪಡಿಸಲಾಗಿದೆಯೆಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಬೀದರ ಜಿಲ್ಲೆಯಲ್ಲಾದ ಮಳೆ ಹಾನಿ ಕುರಿತು ಛಾಯಾಚಿತ್ರಗಳು ಹಾಗೂ ಪತ್ರಿಕಾ ವರದಿಗಳ ಮೂಲಕ ವಿವರಿಸಿದರು. ಒಟ್ಟು 1.67 ಲಕ್ಷ ಹೆ. ಹಾನಿಗೊಳಗಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 711 ಕೋಟಿ ರೂ. ಹಾನಿಯಾದ ಬಗ್ಗೆ ತಿಳಿಸಿದರು. ರಾಜ್ಯ ಸರಕಾರದ ವಿಪತ್ತು ನಿರ್ವಹಣಾದಿಂದ ಬಿಡುಗಡೆಯಾದ 133 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಒಟ್ಟು 1502 ಮನೆಗಳು ಹಾನಿಯಾಗಿದೆ. ರಸ್ತೆ, ಸೇತುವೆ ವಿವಿಧ ಮೂಲಭೂತ ಸೌಕರ್ಯಗಳ 231 ಕೋಟಿ ರೂ. ಹಾನಿಯಾಗಿದೆಯೆಂದು ತಿಳಿಸಿದರು.
ಜಿಲ್ಲಾಡಳಿತ ನೀಡಿದ ಹಾನಿಯ ವರದಿಯನ್ನು ಪರಿಗಣಿಸಿ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುದೆಂದು ಕೇಂದ್ರ ಸರಕಾರದ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಜೀವಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ್ ಜೈನ್, ಬೀದರ ಸಹಾಯಕ ಆಯುಕ್ತರಾದ ಮೊಹಮ್ಮದ ಶಕೀಲ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ತಹಸೀಲ್ದಾರರು ಉಪಸ್ಥಿತರಿದ್ದರು. ಕೇಂದ್ರ ತಂಡವು ಔರಾದ್ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.