ಸತಿಪತಿಗಳ ಭಕ್ತಿ ಶಿವನಿಗೆ ಅಚ್ಚುಮೆಚ್ಚು: ಬಸವಲಿಂಗ ಮಹಾಸ್ವಾಮಿಗಳು

ಸಂಜೆವಾಣಿ ವಾರ್ತೆ,
ವಿಜಯಪುರ,ನ.೬: ಪ್ರತಿಯೊಬ್ಬ ದಂಪತಿಗಳು ಬಸವಾದಿ ಶರಣರ ಹಾಗೆ ಕಾಯಕ ಮತ್ತು ದಾಸೋಹ ಪದ್ಧತಿ ಅಳವಡಿಸಿಕೊಂಡು ಪರಸ್ಪರ ಅರಿತು ಅನ್ಯೋನ್ಯವಾಗಿ ಬದುಕಿದರೆ ಅದು ಶರಣರು ಸಾರಿದಂತೆ ‘ಸತಿ- ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ’ ಎನ್ನುವಂತೆ ಜೀವನ ಸಾರ್ಥಕವಾಗುವುದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳು ನುಡಿದರು.
ವಿಜಯಪುರ ನಗರದ ಹೊರವಲಯದಲ್ಲಿರುವ ಉಕ್ಕಲಿ ರಸ್ತೆಯ ಶಿವಗಿರಿಯ ಬಸಂತ ವನದ ಭವ್ಯ ಮಂಟಪದಲ್ಲಿ ಏರ್ಪಡಿಸಿದ್ದ ಪ್ರಥಮ ಸರಳ ಸಾಮೂಹಿಕ ವಿವಾಹ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಭಾರತೀಯ ಪರಂಪರೆಯಲ್ಲಿ ಧರ್ಮ ಅರ್ಥ ಕಾಮ ಮೋಕ್ಷದ ಪರಿಕಲ್ಪನೆಯಿದ್ದು ಜೀವನದಲ್ಲಿ ಎಲ್ಲಾ ಸ್ತರಗಳು ಪ್ರಮುಖವಾಗಿವೆ. ಕಾರಣ ದಾಂಪತ್ಯ ಬದುಕಿನ ಸಾರ್ಥಕತೆಗೆ ಕುಟುಂಬದಲ್ಲಿ ನಗುವು ತುಂಬಿರಬೇಕು. ಸತ್ಯ ಶುದ್ಧ ಕಾಯಕದೊಂದಿಗೆ ದಾಸೋಹ ತತ್ವವನ್ನು ತಂದೆ ತಾಯಿಯರ ರಕ್ಷಣೆ, ಗುರು ಹಿರಿಯರನ್ನು ಗೌರವಿಸುತ್ತ. ಬಂಧು ಬಾಂಧವರನ್ನು ಪ್ರೀತಿಸುತ್ತಾ. ನೆರೆ ಹೊರೆಯವರನ್ನು ಆದರಿಸುತ್ತ. ದಾನ – ಧರ್ಮ ಮಾಡುತ್ತಾ, ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ತುಂಬುತ್ತಾ ಸಾಗುವುದು ನಿಜವಾದ ಜೀವನ ಸಾಧನೆಯಾಗಿದೆ. ಇಂದು ನವ ಜೀವನಕ್ಕೆ ಕಾಲಿಟ್ಟ ೧೧ ಜೋಡಿ ದಂಪತಿಗಳು. ಈ ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕತೆ ಹೊಂದಿರಿ ಎಂದು ಆಶೀರ್ವದಿಸಿದರು.
ಸಾನ್ನಿಧ್ಯ ವಹಿಸಿದ್ದ ಕಟ್ಟಿಮನಿ-ಹಿರೇಮಠ ಡೋಣೂರು- ಕೊಟ್ಟೂರು ಮಠದ ಶ್ರೀ ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಮನುಷ್ಯ ಇಂದು ವೈಭೋಗದ ಜೀವನದ ಹಗಲುಗನಸಿನ ಬೆನ್ನಿಗೆ ಬಿದ್ದು ಜೀವನದ ಸಾರ್ಥಕತೆ ಮರೆತು, ದು:ಖ, ಅಶಾಂತಿ ನೆಮ್ಮದಿ ಇಲ್ಲದ ಜೀವನ ಸಾಗಿಸುತ್ತಿದ್ದಾನೆ. ಇದಕ್ಕೆ ಅಪವಾದ ಎನ್ನುವಂತೆ ಖ್ಯಾತ ಉದ್ದಿಮೆದಾರರು, ಚಲನ ಚಿತ್ರನಟರು ಆದ ಬಸಂತಕುಮಾರ ಪಾಟೀಲ ಅವರು ತಾಯಿ, ತಾಯ್ನೆಲ, ನಮ್ಮ ಜನ ಸ್ವರ್ಗಕ್ಕಿಂತ ಮಿಗಿಲು ಎನ್ನುವಂತೆ. ವಿಜಯಪುರದಲ್ಲಿ ಅತಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪಿಸಿ ಶಿವಗಿರಿಯನ್ನು ಧರ್ಮ. ಸಂಸ್ಕೃತಿ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ಪ್ರವಾಸೋದ್ಯಮ ಕೇಂದ್ರವಾಗಿಸಿದ್ದಾರೆ. ಹೆತ್ತ ತಾಯಿಯನ್ನು ‘ಸುವರ್ಣ ತುಲಾಭಾರ’ ಮಾಡಿ ‘ಆಧುನಿಕ ಶ್ರವಣ ಕುಮಾರ ‘ಎಂಬ ಅಭಿದಾನವನ್ನು ಹೊಂದಿದ್ದಾರೆ. ಕರ್ನಾಟಕದ ಜನತೆಯ ಒಳಿತಿಗಾಗಿ ಅವರ ಮನದಲ್ಲಿ ಹಲವಾರು ಸದುದ್ದೇಶ ವಿಚಾರಗಳು ಒಡಮೂಡಿದ್ದು. ಅವು ವಿಶಿಷ್ಟ ಯೋಜನೆಗಳೊಂದಿಗೆ ಮುಂಬರುವ ದಿನಗಳಲ್ಲಿ ಅನುಷ್ಠಾನಗೊಳ್ಳಲಿವೆ. ದೇವರು ಅವರಿಗೆ ಆವರ ಕುಟುಂಬ ವರ್ಗದವರಿಗೆ ಅಪಾರ ಒಳಿತನ್ನು ಕರುಣಿಸಲಿ ಎಂದು ಹೃದಯ ತುಂಬಿ ಹಾರೈಸಿದರು.
ಟಿ.ಕೆ.ಪಾಟೀಲ್ (ಬೆನಕಟ್ಟಿ) ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ಡಾ. ರಾಜಕುಮಾರ ಪ್ರಶಸ್ತಿ ಪುರಸ್ಕೃತ ಬಸಂತಕುಮಾರ ಪಾಟೀಲ ಮಾತನಾಡಿ, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಶಿವಗಿರಿ ಶಿವನ ಮೂರ್ತಿ ಪ್ರತಿಷ್ಟಾಪಿಸಿ ಹತ್ತು ಹಲವು ಯೋಚನೆ ಯೊಜನೆಗಳೊಂದಿಗೆ ಪಾರಂಭಗೊAಡ ನಮ್ಮ ಟಿ.ಕೆ.ಪಾಟೀಲ್ ಟ್ರಸ್ಟ್ ಸಮಾಜೋಧಾರ್ಮಿಕ ಕಾರ್ಯಗಳನ್ನು ಎಲ್ಲರ ಸಹಕಾರದೊಂದಿಗೆ ಹಮಿಕೊಳ್ಳುತ್ತ ಬಂದಿದೆ. ಅದರಂತೆ ವ್ಯಕ್ತಿಯ ಜೀವನ ಸಾರ್ಥಕ ಬದುಕಿನ ಲಕ್ಷಣಗಳಾದ ಅಂಗಾAಗದಾನ, ನೇತ್ರದಾನ, ರಕ್ತದಾನದಂಥ ಕಾರ್ಯಕ್ಕೆ ಮುಂದಾಗಬೇಕು. ಎಲ್ಲಾ ಪ್ರಾಣಿಗಳಲ್ಲೂ ದಯೆ ಕರುಣೆ ತೋರಿ ಪರಿಸರ ಕಾಳಜಿ ವಹಿಸಿ, ಮರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.
ಜೀವನದಲ್ಲಿ ಏನೇ ಕಷ್ಟ ನಷ್ಟ ಬಂದರೂ ಎದುರಿಸಬೇಕು. ಆತ್ಮಹತ್ಯೆಯಂತ ಹುಚ್ಚು ಸಾಹಸಕ್ಕೆ ಕೈ ಹಾಕಿ ಜೀವನ ವ್ಯರ್ಥ ಮಾಡಿಕೊಳ್ಳಬಾರದು. ಸಮಸ್ಯೆಗೆ ಸಾವು ಪರಿಹಾರವಲ್ಲ ಎಂದು ಕಿವಿ ಮಾತು ಹೇಳಿ, ಸತಿ ಪತಿಗಳು ಸುಖ ಶಾಂತಿ ನೆಮ್ಮದಿ ಜೀವನ ಸಾಗಿಸಿ ಎಂದು ನವ ದಂಪತಿಗಳ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.
ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಜಿಗಳು, ಜಗದೀಶ್ವರ ಹಿರೇಮಠ, ಮಸೂತಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್.ಕರಡಿ, ಆಶಾ ಎಂ. ಪಾಟೀಲ, ಶೈಲಜಾ ಪಾಟೀಲ ಯತ್ನಾಳ, ಉಪ ಮಹಾಪೌರರಾದ ಸುಮಿತ್ರಾ ಜಾಧವ, ಪಾಲಿಕೆ ಸದಸ್ಯರಾದ ಸ್ವಪ್ನಾ ಕಣಮುಚನಾಳ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಅರವಿಂದ ಹೂಗಾರ, ಖ್ಯಾತ ಉದ್ದಿಮೆದಾರ ಎಸ್.ಎಚ್.ನಾಡಗೌಡ, ಟಿ.ಕೆ.ಪಾಟೀಲ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಆರ್.ಟಿ.ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿವಗಿರಿ ಪುಸ್ತಕ ಮಳಿಗೆಯನ್ನು ಶಿಗ್ಗಾವಿಯ ವಿಧಾನ ಪರಿಷತ್ ಮಾಜಿ ಸದಸ್ಯ ಮಂಜುನಾಥ ಕನ್ನೂರ ಅವರು ಉದ್ಘಾಟಿಸಿ, ನನ್ನೊಳಗಿನ ನಾನು ಕೃತಿ ರಚಿಸಿದ ಡಿವೈಎಸ್ಪಿ ಬಸವರಾಜ ಯಲಿಗಾರ ಅವರನ್ನು ಶಾಲು ಹೊದಿಸಿ ಫಲ ಪುಷ್ಪ ವಿತರಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ನೂತನ ವಧು ವರರಿಗೆ ಮಂಗಲ ಸೂತ್ರ, ಬಳೆ , ಕಾಲುಂಗರ , ಸೀರೆ, ಪಂಚೆ, ಪೇಠ, ಬಾಸಿಂಗ ವಿತರಿಸಿ ಪಂಚ ಕಲಶ ಪೂಜೆ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಆರ್. ಪಾಟೀಲ, ಆದಿತ್ಯ ಪಾಟೀಲ, ಈರಣ್ಣ ಜಾಲವಾದಿ, ಶ್ರೀನಿವಾಸ ಪಾಟೀಲ, ಕುಶರಾಜ ಪರಣ್ಣವರ, ಸಂತೋಷ ಪಾಟೀಲ, ಗಿರೀಶ ಪಾಟೀಲ, ನ್ಯಾಯವಾದಿ ದಾನೇಶ ಅವಟಿ, ಅಮರ ಪರಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಆರತಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ.ಎಸ್.ಖೊದ್ನಾಪೂರ ನಿರೂಪಿಸಿದರು. ಅಶ್ವಿನಿ ಪಾಟೀಲ ವಂದಿಸಿದರು.