
ಬೀದರ್: ‘ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ, ದೇಶಪ್ರೇಮ ಹಾಗೂ ತ್ಯಾಗ ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಿದೆ’ ಎಂದು ಶಕ್ತಿ ಸದನ ಕೇಂದ್ರದ ಮೇಲ್ವಿಚಾರಕಿ ವಿಲಾಸಮತಿ ಸತೀಶ ಹೇಳಿದರು.
ನಗರದ ಟೀಚರ್ಸ್ ಕಾಲೊನಿಯಲ್ಲಿರುವ ಶಕ್ತಿ ಸದನ ಕೇಂದ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಳದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ 248ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಾಲ್ಯದಿಂದಲೇ ಧೈರ್ಯ ಹಾಗೂ ಸಾಹಸ ಪ್ರವೃತ್ತಿ ಬೆಳೆಸಿಕೊಂಡಿದ್ದ ರಾಣಿ ಚೆನ್ನಮ್ಮ ಕುದುರೆ ಸವಾರಿ, ಕತ್ತಿವರಸೆ ಹಾಗೂ ಬಿಲ್ಲುಗಾರಿಕೆಯಲ್ಲಿ ಪರಿಣತಿ ಹೊಂದಿದ್ದರು. ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಮುಂದಾದ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ, ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬಿದ್ದರು. ಬ್ರಿಟಿಷರಿಗೆ ಪ್ರಬಲ ಪ್ರತಿರೋಧ ಒಡ್ಡಿದ್ದ ಅವರು, ನಂತರ ಬಂಧನಕ್ಕೊಳಗಾಗಿ 1829ರಲ್ಲಿ ಬೈಲಹೊಂಗಲದ ಕಾರಾಗೃಹದಲ್ಲಿ ಕೊನೆಯುಸಿರೆಳೆದರು’ ಎಂದು ಸ್ಮರಿಸಿದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಚೆನ್ನಮ್ಮ ಅವರ ಶೌರ್ಯ, ತ್ಯಾಗ ಹಾಗೂ ಹೋರಾಟದ ಮನೋಭಾವ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅವರು ಅಚ್ಚಳಿಯದ ಸ್ಥಾನ ಪಡೆದಿದ್ದಾರೆ’ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.





















