ಚೇಳೂರು, ಸೆ. ೬- ಸಹಕಾರ ಸಂಘಗಳ ಜವಾಬ್ದಾರಿ ಹೆಚ್ಚಾಗಿದ್ದು, ಎಲ್ಲರೂ ಕೈಜೋಡಿಸಿದರೆ ಉತ್ತಮ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉತ್ತಮ ಕಟ್ಟಡ ನಿರ್ಮಿಸಲು ಸಾಧ್ಯ ಎಂದು ಅದಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಸ್. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೧೯೮೧ ರಲ್ಲಿ ಸ್ಥಾಪಿಸಲಾದ ನಮ್ಮೂರು ಹಾಲು ಉತ್ಪಾದಕರ ಸಹಕಾರ ಸಂಘ ಸುಮಾರು ವರ್ಷಗಳಿಂದ ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೂತನ ಕಟ್ಟಡ ನಿರ್ಮಿಸಲು ಗುಬ್ಬಿ ಶಾಸಕರಾದಿಯಾಗಿ ಹಾಗೂ ಧರ್ಮಸ್ಥಳದ ಸಹಕಾರ ಇನ್ನಿತರ ಸಲಹೆ ಸಹಕಾರದಿಂದ ಇಂದು ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ. ನಮ್ಮ ಸಹಕಾರ ಸಂಘದಲ್ಲಿ ಅಧಿಕ ಹಾಲು ಉತ್ಪಾದನೆ ಆಗುತ್ತಿದ್ದು ರೈತ ಬಾಂಧವರು ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಕ್ಕೆ ಸಹಕಾರ ನೀಡಿ ತಮ್ಮ ಹಾಗೂ ಸಹಕಾರ ಸಂಘದ ಏಳ್ಗೆಗೆ ಸಹಕರಿಸಬೇಕು ಎಂದು ಹೇಳಿದರು.
ತ್ಯಾಗಟೂರು ಗ್ರಾಮ ಪಂಚಾಯತಿ ಅಧ್ಯಕ್ಷ ಓಂಕಾರ ಪ್ರಸಾದ್ ಮಾತನಾಡಿ, ಒಂದು ಸಾವಿರ ಕುಟುಂಬಗಳನ್ನು ಹೊಂದಿರುವ ಅದಲಗೆರೆ ಗ್ರಾಮಕ್ಕೆ ಒಂದು ಹೊಸ ಹಾಲು ಉತ್ಪಾದಕರ ಸಂಘದ ಕಟ್ಟಡ ಅವಶ್ಯಕತೆ ಇತ್ತು. ಅದು ನಮ್ಮೆಲ್ಲರ ಇಚ್ಛೆಯಂತೆ ಈಡೇರಿದೆ, ರೈತರು ಪಶುಸಂಗೋಪನೆ ಮಾಡುವುದರ ಮುಖಾಂತರ ತಮ್ಮ ಬದುಕನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದರು.
ರೈತರಿಗೆ ಹಾಲು ಉತ್ಪಾದನೆ ಮಾಡಲು ಸಹಕಾರ ಸಂಘದ ಅಧಿಕಾರಿಗಳಿಂದ ಉತ್ತಮ ಮಾರ್ಗದರ್ಶನ ಅವಶ್ಯಕತೆ ಇದೆ. ಗುಣಮಟ್ಟದ ಹಾಲು ಉತ್ಪಾದಿಸಬೇಕಾದರೆ ರೈತರಿಗೆ ತರಬೇತಿಯಾಗುವ ಮಾರ್ಗದರ್ಶನ ಅತ್ಯಗತ್ಯ ಎಂದು ತಿಳಿಸಿದರು.
ಇಲಾಖೆಯಿಂದ ಬರುವ ಮೂಲಭೂತ ಸೌಕರ್ಯಗಳನ್ನು ರೈತರಿಗೆ ಮನವರಿಕೆ ಮಾಡಿ ಪಡೆದುಕೊಳ್ಳಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅನೇಕ ಯೋಜನೆಗಳಿದ್ದು ಇಂಥ ಯೋಜನೆಗಳನ್ನು ಕೆಲವರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ತಳಮಟ್ಟದ ಬಡ ರೈತರಿಗೆ ಯೋಜನೆಗಳ ಅರಿವೇ ಇರುವುದಿಲ್ಲ. ಆದ್ದರಿಂದ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಪರ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಪಶುವೈದ್ಯೆ ಡಾ. ಶಶಿಕಲಾ ಮಾತನಾಡಿ, ನಮ್ಮ ದೇಶದಲ್ಲಿ ಉತ್ಪಾದಿಸುವ ಹಾಲಿನಲ್ಲಿ ಸರಿಯಾದ ಗುಣಮಟ್ಟ ಇರುವುದಿಲ್ಲ. ವಿದೇಶಿಯರು ನಮ್ಮ ಹಾಲನ್ನು ತಿರಸ್ಕರಿಸುತ್ತಾರೆ, ನಾವು ಗುಣಮಟ್ಟದ ಹಾಲನ್ನು ಉತ್ಪಾದಿಸಬೇಕಾದರೆ ಪಶುಗಳಿಗೆ ಸಮತೋಲನ ಆಹಾರ ನೀಡಬೇಕು. ವೈದ್ಯರ ಸಲಹೆಯನ್ನು ಪಡೆದು ಪಶು ಸಂಗೋಪನೆ ಮಾಡಬೇಕು ಎಂದರು.
ಪಶುಗಳನ್ನು ಸರಿಯಾಗಿ ಸಾಕಲು ಸ್ವಚ್ಛತೆ, ಆಹಾರ ಕ್ರಮ, ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಹಸುಗಳಿಗೆ ಕೆಚ್ಚಲ ಬಾವುವಾದರೂ ಸಹ ಅಂತಹ ಹಾಲನ್ನೇ ಕರೆದು ಡೈರಿಗೆ ತರುತ್ತೀರಿ, ಇದರಿಂದ ಎಷ್ಟು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಅರಿವು ಇರುವುದಿಲ್ಲ. ಆದ್ದರಿಂದ ಎಲ್ಲರೂ ಗುಣಮಟ್ಟದ ಹಾಲನ್ನು ಉತ್ಪಾದಿಸುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ನೂತನ ಕಟ್ಟಡದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಭಾರತಿ ಶ್ರೀನಿವಾಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹದೇವಯ್ಯ, ಮಾಜಿ ಅಧ್ಯಕ್ಷ ರೇಣುಕಪ್ರಸಾದ್, ನಾಗರಾಜು, ಸತೀಶ್, ಬಸವರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀಕಂಠಮೂರ್ತಿ, ನಕುಲಯ್ಯ, ವಿದ್ಯಾಧರ, ಮೇಲ್ವಿಚಾರಕರಾದ ರಾಜು ಮಹೇಶ್, ಪಶುವೈದ್ಯ ಹನುಮಂತಯ್ಯ, ಶಿವಕುಮಾರ್, ರಮೇಶ್, ಪಾಲಾಕ್ಷಯ್ಯ, ಲಕ್ಷ್ಮಿದೇವಮ್ಮ, ಈಶ್ವರಯ್ಯ ಮತ್ತಿತರರು ಪಾಲ್ಗೊಂಡಿದ್ದರು.



























