
ಕಲಬುರಗಿ: ಏ.2:ಭಾರತೀಯ ರಿಜರ್ವ ಬ್ಯಾಂಕು ರಾಷ್ಟ್ರದ ಬ್ಯಾಂಕಾಗಿ ಹಣದುಬ್ಬರ ಹಾಗೂ ಹಣದಕುಸಿತದ ಸನ್ನಿವೇಶಗಳ ನಿರ್ವಹಣೆ, ಸಾಲ ನಿಯಂತ್ರಣ, ವಿದೇಶಿ ವಿನಿಮಯ ಪಾಲಕ, ಅಂತಿಮ ಸಾಲದಾತ, ತೀರುವೆ ಮನೆ ಕಾರ್ಯ, ಕೃಷಿ ಹಾಗೂ ಕೈಗಾರಿಗೆಳ ಅಭಿವೃದ್ಧಿಗಾಗಿ ಹಣಕಾಸಿನ ಸೌಲಭ್ಯ, ಸಂಶೋಧನೆ ಮತ್ತು ವಿಶೇಷ ಕಾರ್ಯಗಳು ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶಹಾಬಜಾರ ಮಹಾದೇವ ನಗರಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಲಾಗಿದ್ದ ‘ಭಾರತೀಯ ರಿಜರ್ವ ಬ್ಯಾಂಕ್‍ನ 91ನೇ ಸಂಸ್ಥಾಪನಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಿಜರ್ವ ಬ್ಯಾಂಕು ಆಗಿನ ಬ್ರಿಟಿಷ ಸರ್ಕಾರ 1935ರ ಎಪ್ರೀಲ್-1ರಂದು ಸ್ಥಾಪಿಸಿತು. ಸ್ವಾತಂತ್ರ್ಯನಂತರ 1949ರ ಜನವರಿ-1ರಂದು ರಾಷ್ಟ್ರೀಕರಣಗೊಳಿಸಲಾಯಿತು. ಆರ್‍ಬಿಐ ಹಣದ ಮೌಲ್ಯವನ್ನು ಕಾಪಾಡುತ್ತದೆ. ತನ್ನ ಹಣಕಾಸಿನ ನೀತಿಯ ಮೂಲಕ ರಾಷ್ಟ್ರದ ಆಂತರಿಕ ಆರ್ಥಿಕ ಸ್ಥಿರತೆಯನ್ನು ತರುತ್ತದೆ. ಮಿತಿಮೀರಿದ ಮತ್ತು ಅನಾವಶ್ಯಕವಾದ ಅನುಭೋಗವನ್ನು ನಿಯಂತ್ರಿಸಿ, ಬಂಡವಾಳವನ್ನು ಉತ್ಪಾದಕ ಕ್ರಿಯೆಗಳಿಗೆ ಹಂಚುವ ಕಾರ್ಯ ಮಾಡುವ ಮೂಲಕ ರಾಷ್ಟ್ರ ತೀವ್ರವಾಗಿ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಪ್ರಮುಖವಾದ ಕೆಲಸವನ್ನು ಮಾಡುತ್ತದೆ. ಸಂವಿಧಾನ ಶಿಲ್ಪಿ, ಶ್ರೇಷ್ಟ ಆರ್ಥಿಕ ಚಿಂತಕರಾದ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಆರ್ಥಿಕ ಚಿಂತನೆಯೇ ರಿಜರ್ವ ಬ್ಯಾಂಕ್ ಸ್ಥಾಪನೆಗೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಸಮಾಜ ಸೇವಕ ಡಾ.ರಾಜಶೇಖರ ಪಾಟೀಲ್ ಹೆಬಳಿ, ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿ ಮಮತಾ ಗೌಳಿ ಸೇರಿದಂತೆ ಇನ್ನಿತರರಿದ್ದರು.




















