Home ಜಿಲ್ಲೆ ಕಲಬುರಗಿ ಪಂಡಿತ ಡಾ.ಪುಟ್ಟರಾಜ ಗವಾಯಿಗಳ ಕೊಡುಗೆ ಅವಿಸ್ಮರಣೀಯ

ಪಂಡಿತ ಡಾ.ಪುಟ್ಟರಾಜ ಗವಾಯಿಗಳ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಮಾ.6: ತಾವು ಎರಡು ವರ್ಷದವರಿದ್ದಾಗ ಕಣ್ಣುಗಳ ಕಳೆದುಕೊಂಡ ಪಂಡಿತ ಡಾ.ಪುಟ್ಟರಾಜ ಗವಾಯಿಗಳು ಬಾಹ್ಯವಾಗಿ ಕುರುಡರಾಗಿದ್ದು, ಆಂತರಿಕವಾಗಿ ಅಪಾರವಾದ ದೃಷ್ಟಿ ಹೊಂದಿದ್ದರು. ಸಂಗೀತ ಕ್ಷೇತ್ರದ ದಿಗ್ಗಜರಾಗಿ, ನೂರಾರು ಸಂಗೀತ ಕಲಾವಿದರ ಬದುಕು ಕಟ್ಟಿಕೊಟ್ಟಿದ್ದಾರೆ. ತ್ರಿಕಾಲ ಜ್ಞಾನಿ, ಸಾಹಿತಿ, ಸಮಾಜಕ್ಕೆ ಆದರ್ಶ ಗುರು, ಸಮಾಜ ಸುಧಾರಕರಾಗಿ ವಿವಿಧ ಆಯಾಮಗಳಿಂದ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಹೇಳಿದರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿನ ಮಲ್ಲಿನಾಥ ಮಹಾರಾಜ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಗಾನಯೋಗಿ ಪಂಡಿತ ಡಾ.ಪುಟ್ಟರಾಜ ಗವಾಯಿಗಳ 112ನೇ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಪುಟ್ಟರಾಜ ಗವಾಯಿಗಳು ದೂರದೃಷ್ಟಿ ಹೊಂದಿದ್ದರು. ಪಂಚಾಕ್ಷರಿ ಗವಾಯಿಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಿದರು. ಬಸವ ಪುರಾಣವನ್ನು ಹಿಂದಿಗೆ ತರ್ಜುಮೆ ಮಾಡಿದರು. ಸಮಾಜದಲ್ಲಿದ್ದ ಅನೇಕ ಜನ ಬಡವರು, ಅನಾಥರು, ಕುರುಡರಿಗೆ ಆಶ್ರಯ ನೀಡಿದ್ದಾರೆ. ತಮ್ಮ 97ನೇ ವರ್ಷದವರೆಗೂ ವಯೋಲಿನ್, ಹಾರ್ಮೋನಿಯಂ, ತಬಲಾ ನುಡಿಸುವ ಮೂಲಕ ಸಂಗೀತ ಸೇವೆ ಮಾಡಿದ್ದು ಗಮನಿಸಿದರೆ, ಅವರಲ್ಲಿರುವ ಸಂಗೀತದ ಅಪ್ಪಟ ಭಕ್ತಿ ನಮಗೆ ಕಂಡುಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಮರ ಜಿ.ಬಂಗರಗಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲುರೆ, ಶಿಕ್ಷಕಿಯರಾದ ಮಂಜುಳಾ ನರೋಣಾ, ಗೀತಾಂಜಲಿ ಹಡಪದ, ಸೇವಕಿ ಸಿದ್ದಮ್ಮ ಕೌಂಟೆ ಹಾಗೂ ವಿದ್ಯಾರ್ಥಿಗಳು ಇದ್ದರು.