ಪರಿಸರದ ಸಮತೋಲನೆಗೆ ಪರ್ವತಗಳ ಕೊಡುಗೆ ಅಪಾರ

ಕಲಬುರಗಿ : ಡಿ.11:ಪರ್ವತಗಳು ನದಿಗಳ ಉಗಮಸ್ಥಾನವಾಗಿ ನೀರು, ಜಲವಿದ್ಯುತ್ ಮತ್ತು ಕೃಷಿಗೆ ಆಧಾರವಾಗಿವೆ. ಜೀವವೈವಿಧ್ಯತೆ, ಖನಿಜ ಸಂಪತ್ತು ಮತ್ತು ವಿಶಿಷ್ಟ ಹವಾಮಾನವನ್ನು ನೀಡುತ್ತವೆ. ಪ್ರವಾಸೋದ್ಯಮ, ಧಾರ್ಮಿಕ ಸ್ಥಳಗಳು ಮತ್ತು ರಕ್ಷಣಾತ್ಮಕ ತಡೆಗೋಡೆಯಾಗಿ ಮಹತ್ವದ ಪಾತ್ರ ವಹಿಸುತ್ತವೆ. ಅವು ಹವಾಮಾನ ನಿಯಂತ್ರಣ, ಕಾರ್ಬನ್ ಹೀರಿಕೊಳ್ಳುವಿಕೆ ಮತ್ತು ಸ್ಥಳೀಯ ಸಂಸ್ಕøತಿಗಳನ್ನು ಸಂರಕ್ಷಿಸುವುದರಲ್ಲಿಯೂ ಪ್ರಮುಖವಾಗಿವೆ. ಇಡೀ ಜಗತ್ತಿನ ಪರಿಸರ ಸಮತೋಲನಕ್ಕೆ ಪರ್ವತಗಳ ಕೊಡುಗೆ ಅಪಾರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿನ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಬೆಳಿಗ್ಗೆ ಏರ್ಪಡಿಸಿದ್ದ “ಅಂತಾರಾಷ್ಟ್ರೀಯ ಪರ್ವತಗಳ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರಾವಿಪ ಗ್ರಾಮೀಣ ಘಟಕದ ಮಾಜಿ ಸಂಚಾಲಕ ಶಿವಯೋಗೆಪ್ಪಾ ಎಸ್. ಬಿರಾದಾರ ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಪರಿಸರದ ಬಗ್ಗೆ ತಿಳಿದುಕೊಂಡು ಪರಿಸರ ಸಂರಕ್ಷಣೆಯ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸಾಲಿ ಸಂಗೀತಾ, ಶಿಕ್ಷಕಿಯರಾದ ಪ್ರಿಯಾಂಕಾ, ಪ್ರೀತಿ, ಶಿಲ್ಪಾ, ಪ್ರೀತಿ, ವರ್ಷಾರಾಣಿ, ಚಂದ್ರಲೇಖಾ, ಸೇವಕಿಯರಾದ ನಾಗಮ್ಮ, ಸುನಿತಾ, ವಿದ್ಯಾರ್ಥಿ ಪ್ರತಿನಿಧಿಗಳಾದ ಆದಿತ್ಯ, ಅದಿತಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.