
ಸಂಜೆವಾಣಿ ವಾರ್ತೆ,
ವಿಜಯಪುರ, ಆ.೨೪: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಜೈನ ಕವಿಗಳು ಹಾಗೂ ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ಸಿಕ್ಯಾಬ್ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೇತ್ರಿ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ವಿಜಯಪುರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ದಿ. ಶಹಾ ಪ್ರತಾಪಚಂದ ಓಸ್ವಾಲ್ ದತ್ತಿ ಹಾಗೂ ದಿ. ರಾಮರಾವ್ ಪ್ರಭಾಕರ ಕುಲಕರ್ಣಿ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಕವಿ ಪಂಪ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹತ್ವದ ಕವಿ. ನಾಗಚಂದ್ರರು ವಿಜಯಪುರದ ಪ್ರಮುಖ ಕವಿಯಾಗಿದ್ದು, ಅವರ ರಾಮಚಂದ್ರ ಚರಿತೆ ಹಾಗೂ ಮಲ್ಲಿನಾಥ ಪುರಾಣದಂತಹ ಕೃತಿಗಳು ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿವೆ. ಒಂಬತ್ತರಿAದ ಹನ್ನೆರಡನೇ ಶತಮಾನದ ಅವಧಿ ಜೈನ ಸಾಹಿತ್ಯದ ಸುವರ್ಣಯುಗವಾಗಿತ್ತು. ಅಂದಿನ ರಾಜರು ಜೈನ ಕವಿಗಳಿಗೆ ರಾಜಾಶ್ರಯ ನೀಡಿದ್ದರಿಂದ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜೈನರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಚಡಚಣ ಸಂಗಮೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಎಂ.ಎಸ್. ಮಾಂಗಟಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೆಗನ್ನಡದ ಪ್ರಮುಖ ಮಹಾಕಾವ್ಯಗಳು, ವ್ಯಾಕರಣ ಗ್ರಂಥಗಳು ಹಾಗೂ ಧಾರ್ಮಿಕ-ಲೌಕಿಕ ಕಾವ್ಯಗಳ ರಚನೆಯ ಮೂಲಕ ಜೈನ ಋಷಿಗಳು ಮತ್ತು ಕವಿಗಳು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ವಿಜಯಪುರ ಕಸಾಪ ಕವಿಗಳು, ಲೇಖಕರು ಹಾಗೂ ಉಪನ್ಯಾಸಕರಿಗೆ ವೇದಿಕೆ ಕಲ್ಪಿಸುವ ಮೂಲಕ ಸಾಹಿತ್ಯದ ಕಂಪನ್ನು ರಾಜ್ಯಾದ್ಯಂತ ಪಸರಿಸುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.
ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಆನಂದ ಕುಲಕರ್ಣಿ ಅವರು ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆದಿಕವಿ ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ, ನಯಸೇನ ಹಾಗೂ ಚಾವುಂಡರಾಯ ಮೊದಲಾದ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಆಲಮೇಲದ ಹಿರಿಯ ಸಾಹಿತಿ ಸಿದ್ರಾಮಪ್ಪ ಉಪ್ಪಿನ ಅವರು ರಚಿಸಿರುವ ‘ಅಲ್ಲಮನೊಂದಿಗೆ ಅನುಸಂಧಾನ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಸಾಹಿತಿ ಮಮತಾ ಮುಳಸಾವಳಗಿ ಕೃತಿಯನ್ನು ಪರಿಚಯಿಸಿದರು. ಲೇಖಕ ಹಾಗೂ ಹಿರಿಯ ಸಾಹಿತಿ ಸಿದ್ರಾಮಪ್ಪ ಉಪ್ಪಿನ ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಶೃತಿ ಅವರು ‘ವ್ಯಸನಮುಕ್ತ ಸಮಾಜದ ಇಂದಿನ ಅಗತ್ಯತೆ’ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ನಿರೂಪಿಸಿದರು. ವಿಜಯಲಕ್ಷ್ಮೀ ಹಳಕಟ್ಟಿ ವಂದಿಸಿದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಶಶಿಕಲಾ ನಾಯ್ಕೋಡಿ, ಶಿವಕುಮಾರ ಉಪ್ಪಿನ, ಬಿ.ಬಿ. ಮಾಡ್ಯಾಳ, ರಾಜಣ್ಣ ಬೋವಿ, ಲತಾ ವಾಲೀಕಾರ, ಶರಣಮ್ಮ ಹಾದಿಮನಿ, ಗಂಗಮ್ಮ ರಡ್ಡಿ, ಸಮೃದ್ಧಿ ಆಕಳವಾಡಿ, ಶ್ರೀಕಾಂತ ನಾಡಗೌಡ, ಬಿ.ವಿ. ಪಟ್ಟಣಶೆಟ್ಟಿ, ಎಂ.ಎನ್. ನಿಂಬಾಳ, ಎಲ್.ಬಿ. ಶೇಖ್, ಪ್ರದೀಪ ನಾಯ್ಕೋಡಿ, ಸಹನಾ ಬಿರಾದಾರ, ಲಕ್ಷ್ಮೀ ಬಿರಾದಾರ, ಬಿ.ಕೆ. ಶಿವಲೀಲಾ, ಬಿ.ಕೆ. ಪ್ರಭು, ಬಿ.ಕೆ. ಶೃತಿ, ಬಿ.ಕೆ. ಸುಲೋಚನಾ, ಜಿ.ಎಂ. ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.






























