ಸಂವಿಧಾನ ದೇಶದ ಹೃದಯ, ಆತ್ಮ, ರಾಷ್ಟ್ರಗ್ರಂಥ

ಕಲಬುರಗಿ :ನ.26: ಸಂವಿಧಾನವು ಕೇವಲ ಒಂದು ಪುಸ್ತಕವಲ್ಲ. ಅದು ದೇಶದ ಹೃದಯ, ಆತ್ಮ, ರಾಷ್ಟ್ರಗ್ರಂಥವಾಗಿದೆ. ಸಂವಿಧಾನದ ತತ್ವಗಳ ಪಾಲನೆ, ಸಂರಕ್ಷಣೆ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ನಲ್ಲಿರುವ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಬೆಳಿಗ್ಗೆ ಏರ್ಪಡಿಸಿದ್ದ “76ನೇ ಸಂವಿಧಾನದ ದಿನಾಚರಣೆ” ಯಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿ ನಂತರ ಅವರು ಮಾತನಾಡುತ್ತಿದ್ದರು. ಸಂವಿಧಾನವು ಮೂಲಭೂತ ಕಾನೂನು ಆಗಿದ್ದು, ಇದು ಸರ್ಕಾರದ ಅಧಿಕಾರಗಳು ಮತ್ತು ಮಿತಿಯನ್ನು, ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ಇದು ದೇಶದ ಆಡಳಿತಕ್ಕೆ ಚೌಕಟ್ಟನ್ನು ಒದಗಿಸುತ್ತದೆ, ಪ್ರಜಾಪ್ರಭುತ್ವ, ಜಾತ್ಯತೀತತೆ, ಮತ್ತು ಸಮಾನತೆ ತತ್ವಗಳನ್ನು ಎತ್ತಿಹಿಡಿಯುತ್ತದೆ. ಯಾವುದೇ ಅನ್ಯಾಯ ಅಥವಾ ಅಧಿಕಾರದ ದುರುಪಯೋಗದ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರಾದ ಪೂಜಾ ಹೂಗಾರ, ಸ್ನೇಹಾ ಚೌಹಾಣ, ಪ್ರಮುಖರಾದ ವಿಜಯ, ಸತ್ಯಾನಂದ, ಮಹೇಶ, ಸಂತೋಷ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.