ಎಲ್ಲರ ಸಹಕಾರದಿಂದ ಸಮ್ಮೇಳನ ಯಶಸ್ವಿ: ಸಿದ್ಧಲಿಂಗಪ್ಪ

ತುಮಕೂರು, ಜ. ೨- ನಗರದಲ್ಲಿ ಎರಡು ದಿನಕಾಲ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಸಮ್ಮಳನದ ಆಶಯ ಈಡೇರಿದೆ. ಯಶಸ್ಸಿಗೆ ಶ್ರಮಿಸಿ, ಸಹಕರಿಸಿದವರನ್ನು ಅಭಿನಂದಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ನವರು, ಮುಂದೆಯೂ ಕನ್ನಡದ ಕಾರ್ಯಗಳಿಗೆ ಇದೇ ರೀತಿ ಕೈ ಜೋಡಿಸುವಂತೆ ಮನವಿ ಮಾಡಿದರು.


ನಗರದ ಕನ್ನಡ ಭವನದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನವು ಕನ್ನಡಿಗರನ್ನು ಒಟ್ಟುಗೂಡಿಸುವ, ಕನ್ನಡ ಭಾಷೆ ಬೆಳೆಸುವ, ಕನ್ನಡ ಸಂಸ್ಕೃತಿ ಮೆರೆಸುವ ಹಬ್ಬವಾಗಬೇಕು. ಎಲ್ಲಾ ಕನ್ನಡ ಮನಸ್ಸುಗಳು ಕೈ ಜೋಡಿಸಿದಾಗ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.


ವಿಶೇಷವಾಗಿ ಜಿಲ್ಲಾಡಳಿತ, ಜಿಲ್ಲಾ ಸಚಿವರು, ಶಾಸಕರು, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಕಾಲೇಜುಗಳು, ಪರಿಷತ್ತಿನ ಪದಾಧಿಕಾರಿಗಳು ಜತೆಯಾಗಿ ಸಹಕರಿಸಿದರು. ಕನ್ನಡಕ್ಕಾಗಿ ಎಲ್ಲರೂ ಒಗ್ಗೂಡಬೇಕು. ಸಮುದಾಯಗಳಲ್ಲಿ, ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ನಾವು ಕನ್ನಡ ಬೆಳೆಸುವ ಕಾರ್ಯಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.


ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಡಾ.ಧನಿಯಾಕುಮಾರ್ ಮಾತನಾಡಿ, ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಜಾತಿ, ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೆಲ್ಲಾ ಒಟ್ಟಾಗಿ ದುಡಿದ ಫಲವಾಗಿ ಸಮ್ಮೇಳನ ಯಶಸ್ವಿಯಾಯಿತು. ಸಮ್ಮೇಳನದ ಗೋಷ್ಠಿಗಳೂ ಕನ್ನಡ ಜಾಗೃತಿಗೆ ಉಪಯುಕ್ತವಾಗಿದ್ದವು. ಮುಂದೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳು ಜತೆಗೂಡಿ ವಿದ್ಯಾರ್ಥಿಗಳನ್ನು ಮೊಬೈಲ್ ಮೋಹದಿಂದ ಮುಕ್ತಗೊಳಿಸುವ ಅಭಿಯಾನ ಆರಂಭಿಸಬೇಕು ಎಂದು ಸಲಹೆ ಮಾಡಿದರು.


ಪ್ರಸ್ತುತ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಇದು ಅವರ ಅಧ್ಯಯನಕ್ಕೂ ಮಾರಕವಾಗಿದೆ. ಜತೆಗೆ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸಿ ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ ಎಂದು ವಿದ್ಯಾರ್ಥಿಗಳನ್ನು ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ರಾಜಶೇಖರ್, ತುಮಕೂರು ತಾಲ್ಲೂಕು ಅಧ್ಯಕ್ಷ ಬೆಳ್ಳಾವಿ ಶಿವಕುಮಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ರಾಜ್ಯ ಕಲಾವಿದರ ಒಕ್ಕೂಟದ ಅಧ್ಯಕ್ಷ ವೀರೇಶ್ ಗುಬ್ಬಿ, ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಮಹಿಳಾ ಘಟಕ ಅಧ್ಯಕ್ಷೆ ರಮ್ಯಾ, ಅಂಬೇಡ್ಕರ್ ಪ್ರಚಾರ ಸಮಿತಿ ಮುಖಂಡರಾದ ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಮುಖಂಡರಾದ ಗುರುರಾಘವೇಂದ್ರ, ಆದಿಲ್ ಬಾಷಾ, ನಟರಾಜಶೆಟ್ಟಿ, ಬೆಸ್ಟೆಕ್ಸ್ ರಾಮರಾಜು, ರಫೀಕ್ ಅಹ್ಮದ್, ನಳಿನಾ, ವಿಜಯಲಕ್ಷ್ಮಿ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕಾರಣರಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಕಾರ್ಯದರ್ಶಿ ಡಾ.ಸಣ್ಣಹೊನ್ನಯ್ಯ ಕಂಟಲಗೆರೆ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು.