
ಗುರುಮಠಕಲ್:ಜ.29:ಮನರೇಗಾ ಯೋಜನೆಯ ಹೆಸರನ್ನು ಬದಲಿಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ, ಗುರುಮಠಕಲ್ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಗಾಂಧಿ ಮೈದಾನದಿಂದ ಬಸವೇಶ್ವರ ವೃತ್ತದವರೆಗೆ ಜಾಥಾ ನಡೆಸಿ, ತಹಸೀಲ್ದಾರ್ ಚೆನ್ನಮಲ್ಲಪ್ಪ ಗಂಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಪ್ತ ಖಾತೆ ಸಚಿವರು ಹಾಗೂ ಶ್ರೀ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರು, ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿನಿಂದಲೇ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಹುಟ್ಟಿಕೊಂಡಿದೆ ಎಂದು ಹೇಳಿದರು.
ಬಡವರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕಾಗಿ ನೀಡುವ ಉದ್ದೇಶದಿಂದ, ಅವರು ವಾಸಿಸುವ ಸ್ಥಳದಲ್ಲೇ ವರ್ಷಪೂರ್ತಿ ಉದ್ಯೋಗ ಕಲ್ಪಿಸುವುದೇ ಮನರೇಗಾ ಯೋಜನೆಯ ಆತ್ಮವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗಾಂಧೀಜಿಯವರ ಹೆಸರಿನ ಯೋಜನೆಗಳನ್ನು ದುರ್ಬಲಗೊಳಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಹಿನ್ನಡೆಯತ್ತ ತಳ್ಳುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಗಾಂಧಿ ಕೇವಲ ಹೆಸರು ಅಲ್ಲ – ಅದು ಅನ್ಯಾಯದ ವಿರುದ್ಧದ ಹೋರಾಟದ ಸಂಕೇತ” ಎಂದು ಚಿಂಚನಸೂರು ಹೇಳಿದರು. ಗಾಂಧಿ ಎಂಬ ಹೆಸರನ್ನು ಅಳಿಸುವ ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ಹಾಗೂ ಮನವಿ ಸಲ್ಲಿಕೆ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜ್ ಗೋಪಾಲ್ ರೆಡ್ಡಿ, ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗಾರ್, ಖಜಾಂಚಿ ಚಿದಾನಂದಪ್ಪ, ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲ, ಸಾಯಬಣ್ಣ ಬೋರಬಂಡ, ಚಾಂದ್ ಪಾಷ, ಸೈಯ್ಯದ್ ಬಾಬಾ (ಅಸೆಂಬ್ಲಿ ಅಧ್ಯಕ್ಷ), ಆನಂದ್, ಆಂಜನೇಯ, ತಿಮ್ಮಾರೆಡ್ಡಿ, ಸುದರ್ಶನ ಪಾಟೀಲ್, ಬಾಬು ತಲಾರಿ, ಫಯಾಜ್ ಅಹಮದ್, ಅಕ್ತರ್ ಪ್ಯಾರೆ, ಕಾಶಪ್ಪ ದೊರೆ, ಕಾಶಪ್ಪ ಚಿನ್ನಾಕರ, ಸರೋಜಾ, ಶಾಂತಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.



























