Home ಜಿಲ್ಲೆ ವಿಜ್ಞಾನದ ಒಗಟುಗಳು ಕೃತಿಯು ಸತ್ಯದರ್ಶನ ಮಾಡಿಸುತ್ತವೆ: ಜಗನ್ನಾಥ ಹೆಬ್ಬಾಳೆ

ವಿಜ್ಞಾನದ ಒಗಟುಗಳು ಕೃತಿಯು ಸತ್ಯದರ್ಶನ ಮಾಡಿಸುತ್ತವೆ: ಜಗನ್ನಾಥ ಹೆಬ್ಬಾಳೆ

ಬೀದರ: ಹೆಚ್ಚು ಕಾಲ ಮೊಬೈಲ್ ಬಳಸದೆ ಪುಸ್ತಕಗಳನ್ನು ಹಿಡಿದು ಅಧ್ಯಯನ ಮಾಡಿದಾಗ ಮಾತ್ರ ಇಂತಹ ಮೌಲ್ಯಿಕ ಕೃತಿಗಳನ್ನು ರಚಿಸಲು ಸಾಧ್ಯವಾಗುತ್ತದೆ. ಪುಸ್ತಕಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯುತ್ತವೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಯೋಜನಾಧಿಕಾರಿ ಬಾಬುರಾವ ದಾನಿ ತಿಳಿಸಿದರು.
ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ಜರುಗಿದ ಶ್ರೀಮತಿ ಶೈಲಜಾ ಜಿ. ಹುಡಗೆ ವಿರಚಿತ ವಿಜ್ಞಾನದ ಒಗಟುಗಳು ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ವ್ಯಕ್ತಿಗೆ ತಲೆತಗ್ಗಿಸುವಂತೆ ಮಾಡುತ್ತದೆ. ಪುಸ್ತಕಗಳ ಅಧ್ಯಯನದಿಂದ ತಲೆ ಎತ್ತಿ ಓಡಾಡುವಂತಾಗುತ್ತದೆ. ಸತತ ಅಭ್ಯಾಸ ಮತ್ತು ಅಕ್ಷರ ಜ್ಞಾನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಉತ್ತಮ ಕೃತಿಗಳನ್ನು ನೀಡಬಹುದು. ಇದಕ್ಕೆ ಶೈಲಜಾ ಹುಡಗೆ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಒಗಟುಗಳಿಂದ ಆಯಾಸ ದೂರವಾಗುತ್ತದೆ. ಮೆದುಳು ಚುರುಕುಗೊಳ್ಳುತ್ತದೆ. ವಿವೇಚನಾ ಶಕ್ತಿ ಹೆಚ್ಚಿಸುತ್ತದೆ. ಜ್ಞಾನ ವೃದ್ಧಿಸುತ್ತದೆ. ಇಂತಹ ಜ್ಞಾನಭಂಡಾರ ಒಳಗೊಂಡ ಕೃತಿಯೇ ವಿಜ್ಞಾನದ ಒಗಟುಗಳು. ನಾನಾರು? ಎನ್ನುವ ಜನಪದ ಶೈಲಿಯ ಪ್ರಶ್ನೆ ಬಳಸಿಕೊಂಡು ಒಗಟುಗಳ ಮೂಲಕ ವಿಜ್ಞಾನದ ಜ್ಞಾನವನ್ನು ಮಕ್ಕಳಿಂದ ಹಿರಿಯರವರೆಗೆ ನೀಡುವ ಶೈಲಜಾ ಹುಡಗೆಯವರ ಅದ್ಭುತ ಮತ್ತು ವಿನೂತನ ಪರಿಕಲ್ಪನೆ ಮೆದುಳಿಗೆ ಸಾಣೆ ಹಿಡಿಯುತ್ತದೆ. ಒಗಟುಗಳು ಸತ್ಯದರ್ಶನ ಮಾಡಿಸುತ್ತವೆ. ಇವರಿಂದ ಹೆಚ್ಚಿನ ಕೃತಿಗಳು ಹೊರಬರಲಿ ಎಂದರು.
ಪುಸ್ತಕ ಪರಿಚಯ ಮಾಡಿಕೊಟ್ಟ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕಲಾಲ್ ದೇವಿಪ್ರಸಾದ ಮಾತನಾಡಿ 200 ಒಗಟುಗಳನ್ನು ಒಳಗೊಂಡ ಈ ಪುಸ್ತಕ ಭೌತಶಾಸ್ತ್ರ, ರಸಾಯನಶಾಸ್ತ್ರ, ಬಾಹ್ಯಾಕಾಶ ಸೇರಿದಂತೆ ಹಲವು ವಿಷಯ ಒಳಗೊಂಡಿದೆ. ಓದುಗರಿಗೆ ಕುತೂಹಲ ಮೂಡಿಸುವ ಈ ಕೃತಿಯು ಶರೀರದ ಅಂಗಾಂಗಳ ಬಗ್ಗೆ ಸುಲಭವಾಗಿ ಜ್ಞಾನ ನೀಡುತ್ತದೆ. ಅಡುಗೆ ಮನೆಯಿಂದ ಹಿಡಿದು ಬಾಹ್ಯಾಕಾಶವರೆಗೆ ಒಗಟುಗಳಿವೆ ಎಂದರು.
ಪುಸ್ತಕದ ಲೇಖಕಿ ಶೈಲಜಾ ಜಿ. ಹುಡಗೆ ಮಾತನಾಡಿ ಮನೆಯಲ್ಲಿಯೇ ವಿಜ್ಞಾನದ ವಾತಾವರಣ ಸಿಕ್ಕ ನನಗೆ ಒಗಟು ಬರೆಯಲು ಪ್ರೇರಣೆಯಾಯಿತು. ಪತಿ ಗುಂಡಪ್ಪ ಹುಡಗೆಯವರ ತಿದ್ದುಪಡಿಯೊಂದಿಗೆ ಆರಂಭವಾದ ಬರಹಕ್ಕೆ ಪ್ರೋತ್ಸಾಹದ ನೀರುಣಿಸಿ ಪೋಷಿಸಿದವರು ಬಾಬುರಾವ ದಾನಿ ಮತ್ತು ಡಾ. ಜಗನ್ನಾಥ ಹೆಬ್ಬಾಳೆ ಎಂದು ಸ್ಮರಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿರ್ದೇಶಕಿ ಡಾ. ಸಾವಿತ್ರಿಬಾಯಿ ಹೆಬ್ಬಾಳೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಗುಂಡಪ್ಪ ಹುಡಗೆ ಮಾತನಾಡಿದರು. ಇದೇ ವೇಳೆ ಸರ್ಕಾರಿ ಪದವಿ ಮವಿದ್ಯಾಲಯದ ಪ್ರಾಧ್ಯಾಪಕ ಡಾ. ಸಂಗಶೆಟ್ಟಿ ಶೆಟಕಾರ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ವೇದಿಕೆ ಮೇಲೆ ಕರ್ನಾಟಕ ಪ್ರೌಢ ಶಾಲಾ, ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಬಳವಂತರಾವ ರಾಠೋಡ್, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ. ರಾಜಕುಮಾರ ಹೆಬ್ಬಾಳೆ ಉಪಸ್ಥಿತರಿದ್ದರು. ಕೊನೆಯಲ್ಲಿ ಲೇಖಕಿ ಶೈಲಜಾ ಹುಡಗೆ ಹಾಗೂ ಗುಂಡಪ್ಪ ಹುಡಗೆ ದಂಪತಿಗಳಿಗೆ ಸನ್ಮಾನಿಸಲಾಯಿತು. ವಿವಿಧ ವಿಷಯಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು.
ತಿಂಗಳ ಪುಸ್ತಕ ಪರಿಚಯ ಸಮಿತಿ ಅಧ್ಯಕ್ಷೆ ಡಾ. ಸುನಿತಾ ಕೂಡ್ಲಿಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಜಾಪ ಮಹಿಳಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಸಂತಾಜಿ ಸ್ವಾಗತಿಸಿದರೆ ಅಂಬಿಕಾ ಬಿರಾದಾರ ನಿರೂಪಿಸಿದರು. ವೈಜಿನಾಥ ಪಾಟೀಲ ವಂದಿಸಿದರು.