
ಕೋಲಾರ,ಸೆ,೭-ಭಗವಂತನ ಅವತಾರ ಮತ್ತು ಲೀಲೆಗಳನ್ನು ಕುರಿತು ಭಾಗವತವು ರಚಿತವಾಗಿದೆ ಹಾಗೂ ಭಾಗವತವು ಗುರು ಉಪದೇಶವಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.
ಕೈವಾರ ಶ್ರೀ ಯೋಗಿ ನಾರೇಯಣ ಮಠದ ವತಿಯಿಂದ ಒಂದು ವರ್ಷಗಳ ಕಾಲ ಹಮ್ಮಿಕೊಳ್ಳಲಾಗಿರುವ ಕೈವಾರ ತಾತಯ್ಯನವರ ೩೦೦ ನೇ ಜಯಂತೋತ್ಸವದ ಕಾರ್ಯಕ್ರಮದ ಅಂಗವಾಗಿ ಪೋತನ ಭಾಗವತ ಹಾಗೂ ಅಮರನಾರೇಯಣ ಶತಕದ ಪ್ರವಚನ ಸಪ್ತಾಹವನ್ನು ಶ್ರೀನಿವಾಸಪುರ ಪಟ್ಟಣದ ಶಂಕರಮಠದ ಜಗದ್ಗುರು ಶ್ರೀ ಭಾರತೀತೀರ್ಥ ಸಭಾ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಭಾಗವತದಲ್ಲಿ ಪರಮಾತ್ಮನು ಯಾವ ಯಾವ ಸಮಯದಲ್ಲಿ ಬಂದಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ಹೇಳಿದ್ದಾರೆ. ಭಾಗವತದಲ್ಲಿರುವ ಕಥೆಗಳು ಮಹತ್ವಪೂರ್ಣವಾದುದು. ಗುರು ಉಪದೇಶವೆಂದರೆ ಆತ್ಮದ ಉದ್ದಾರ. ಭಾಗವತದ ಸಂದೇಶಗಳಿಂದ ಆತ್ಮಪ್ರಕಾಶವಾಗುತ್ತದೆ. ಗುರುಗಳು ಹೇಳಿರುವ ಸಾಧನೆಯ ಮಾರ್ಗವನ್ನು ಅನುಸರಿಸಿದರೆ ಪರಮಾತ್ಮನ ದರ್ಶನವನ್ನು ಮಾಡಬಹುದು.ನಮ್ಮಲ್ಲಿರುವ ಶತ್ರುಗಳಾದ ಆಸೆ, ಕ್ರೋಧ, ದ್ವೇಷ, ಮಾತ್ಸರ್ಯಗಳನ್ನು ಹೊಡೆದೊಡಿಸಲು ಶ್ರೀ ಭಾಗವತವು ಸಹಕಾರಿಯಾಗಿದೆ ಎಂದರು.
ಕೈವಾರ ಕ್ಷೇತದ ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಸ್ತಾವಿಕವಾಗಿ ಮಾತನಾಡಿ ಕೈವಾರ ತಾತಯ್ಯನವರಿಗೆ ಪೋತನಾಮಾತ್ಯರನ್ನು ಕಂಡರೆ ಬಹು ಭಕ್ತಿ.ತಾತಯ್ಯನವರು ತಮ್ಮ ಅಮರನಾರೇಯಣ ಶತಕದಲ್ಲಿ ಕವಿನಾಯಕರಿಗೆಲ್ಲ ಕಲ್ಪವೃಕ್ಷವಿದ್ದಂತೆ ಎಂದು ಕೊಂಡಾಡಿದ್ದಾರೆ.
ತಾತಯ್ಯನವರ ಸಾಹಿತ್ಯ ರಚನೆಗೂ ಪೋತನಾಮಾತ್ಯರು ರಚಿಸಿರುವ ಭಾಗವತ ಸ್ಪೂರ್ತಿಯಾಗಿದೆ. ಈ ತೆಲುಗು ಮೂಲದ ಭಾಗವತವನ್ನು ಕನ್ನಡಕ್ಕೆ ತರಬೇಕು ಎಂಬುದು
ಬಹುದಿನಗಳ ಆಸೆಯಾಗಿತ್ತು. ಆ ಆಸೆಯು ಸದ್ಗುರು ತಾತಯ್ಯನವರ ಕೃಪೆಯಿಂದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಈಡೇರಿಸಿದ್ದಾರೆ. ೧೨ ಸ್ಕಂದಗಳ ೮ ಸಂಪುಟಗಳನ್ನು ಶ್ರೀ ಯೋಗಿನಾರೇಯಣ ಮಠದ ವತಿಯಿಂದ ಮುದ್ರಿಸಲಾಗಿದೆ. ಇದರ ಸದುಪಯೋಗವನ್ನು ಭಕ್ತರು ಉಪಯೋಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಪ್ರವಚನಕಾರರಾದ ಮಂಕಾಲ ಶ್ರೀಹರಿಶರ್ಮ ರವರು ಪೋತನ ಭಾಗವತದ ಪ್ರವಚನವನ್ನು ನೀಡಿದರು.
ಪ್ರವಚನದಲ್ಲಿ ಪೋತನ ಭಾಗವತದ ಹಲವಾರು ಘಟ್ಟಗಳನ್ನು ವಿವರಿಸಿ ವ್ಯಾಖ್ಯಾನಿಸಿದರು. ಏಳು ದಿನಗಳ ಕಾಲ ಸಂಜೆ ೬.೩೦ ರಿಂದ ೮ ಗಂಟೆಯವರೆಗೂ ಈ ಭಾಗವತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹೋಳೂರು ಸಂತೋಷ್ ಸ್ವಾಗತಿಸಿದರು. ಹರಿಪ್ರಿಯಾ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಆರ್.ರಮೇಶ್ಕುಮಾರ್, ಕೆ.ಎಂ.ಎಫ್ ಸದಸ್ಯರಾದ ಕೆ.ಕೆ.ಮಂಜುನಾಥ್, ಜಿಲ್ಲಾಪಂಚಾಯಿತಿ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ,
ಪುರಸಭೆ ಸದಸ್ಯರಾದ ಬಿ.ಎಲ್.ಪ್ರಕಾಶ್, ಹೇಮಂತ್, ಕೈವಾರ ಮಠದ ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ, ಹಿರಿಯ ನಿವೃತ್ತ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಲಕ್ಷ್ಮಣ್ಗೌಡ,
ಹೊದಿಲಿನಾರಾಯಣಸ್ವಾಮಿ, ಕೋಲಾರದ ವೆಂಕಟಕೃಷ್ಣಯ್ಯಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.























