Home ಜಿಲ್ಲೆ ಭಗವದ್ಗೀತೆ ಶ್ರೀಕೃಷ್ಣನ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ: ಡಾ. ಔದ್ರಾಮ

ಭಗವದ್ಗೀತೆ ಶ್ರೀಕೃಷ್ಣನ ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ: ಡಾ. ಔದ್ರಾಮ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೫:ಶ್ರೀಕೃಷ್ಣ ಪರಮಾತ್ಮನು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಭಗವದ್ಗೀತೆ ಪ್ರಮುಖವಾದುದು. ಅದರಲ್ಲಿರುವ ತತ್ವ, ಜ್ಞಾನ ಹಾಗೂ ಜೀವನ ಮೌಲ್ಯಗಳನ್ನು ಅರಿತು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಾಂತಿ, ಸಹಬಾಳ್ವೆ, ಮಾನವೀಯತೆ ಮತ್ತು ಸೌಹಾರ್ದತೆ ಜೀವನದ ಪ್ರಮುಖ ಮೌಲ್ಯಗಳಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಷ್ಟದ ಸಂದರ್ಭಗಳಲ್ಲಿ ಧೈರ್ಯ ಕಳೆದುಕೊಳ್ಳದೆ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವುದು, ಸತ್ಯದ ಮಾರ್ಗದಲ್ಲಿ ಸಾಗುವುದು ಹಾಗೂ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸುವುದು ಶ್ರೀಕೃಷ್ಣನ ಜೀವನದಿಂದ ಕಲಿಯಬಹುದಾದ ಪ್ರಮುಖ ಪಾಠಗಳಾಗಿವೆ. ಯುವಜನತೆ ಶ್ರೀಕೃಷ್ಣನ ಆದರ್ಶಗಳು ಮತ್ತು ಭಗವದ್ಗೀತೆಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜ್ಞಾನದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಡಾ. ಮಾಧವ ಗುಡಿ ಅವರು ಶ್ರೀಕೃಷ್ಣನ ಜನನ, ಬಾಲ್ಯ ಜೀವನ, ಮಹಾಭಾರತದಲ್ಲಿನ ಪಾತ್ರ ಹಾಗೂ ಅರ್ಜುನನಿಗೆ ನೀಡಿದ ಭಗವದ್ಗೀತೆಯ ಉಪದೇಶವನ್ನು ವಿವರಿಸಿದರು.
ಕರ್ಮ, ಜ್ಞಾನ, ಧರ್ಮ ಮತ್ತು ಕರ್ತವ್ಯದ ಕುರಿತು ಗೀತೆಯಲ್ಲಿ ಪ್ರತಿಪಾದಿಸಿರುವ ಸಂದೇಶಗಳು ಇಂದಿಗೂ ಮಾನವ ಜೀವನಕ್ಕೆ ದಾರಿದೀಪವಾಗಿವೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಜಿಲ್ಲಾ ಪಂಚಾಯಿತಿಯ ಸಹಾಯಕ ನಿರ್ದೇಶಕ ಡಿ.ಬಿ. ಮೆಂದಳೆ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಚಲವಾದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.