ರಾಮನಗರ,ಸೆ.೧೮:ರಾಜಕೀಯ ಅಧಿಕಾರ ಇಲ್ಲದೆ ಹೋದರೆ ಹಿಂದುಳಿದ ವರ್ಗವೂ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿಲ್ಲ. ಹೀಗಾಗಿ ಹಿಂದುಳಿದ ಜಾತಿಗಳು ರಾಜಕೀಯವಾಗಿ ಸಂಘಟಿತರಾಗಬೇಕಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಶಶಿ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ೨ ಲಕ್ಷಕ್ಕಿಂತಲೂ ಹೆಚ್ಚು ಹಿಂದುಳಿದ ವರ್ಗದವರಿದ್ದಾರೆ. ಆದರೂ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಸ್ಥಾನಮಾನ ಪಡೆದುಕೊಂಡಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ಬಗ್ಗೆ ಹೆಚ್ಚಿನ ಮಾತನಾಡಿಲ್ಲ. ಹಿಂದುಳಿದ ವರ್ಗವೂ ರಾಜಕೀಯವಾಗಿ ಸಂಘಟಿತಗೊಳ್ಳಬೇಕು ಎಂದರು.
ಇಂದಿನ ಕಾಲಘಟ್ಟದಲ್ಲಿ ನೂರಾರು ಜನರನ್ನು ಸೇರಿಸಿ ಸಮಾವೇಶ ಮಾಡುವುದು ಕಷ್ಟ. ಆದರೆ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟವೂ ಈ ಕಾರ್ಯ ಮಾಡುತ್ತಿದೆ. ಇದು ದೇವರಾಜ ಅರಸು ಜಯಂತಿ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗದೆ ಮುಂದಿನ ದಿನದಲ್ಲಿ ಹಿಂದುಳಿದ ವರ್ಗದ ಒಗ್ಗೂಡಿಸಲು ಮುಂದಾಗಬೇಕಿದೆ. ಎಲ್ಲಾ ಪಕ್ಷವೂ ಹಿಂದುಳಿದ ಸಮುದಾಯವನ್ನು ನಿರ್ಲಕ್ಷ್ಯ ಮಾಡಿಕೊಂಡೇ ಬಂದಿದೆ. ಇದಕ್ಕೆ ಕಾರಣ ಹಿಂದುಳಿದ ವರ್ಗವೂ ಈ ತನಕ ಒಗ್ಗಟ್ಟು ಕಾಯ್ದುಕೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಅಖಿಲ ಭಾರತ ಕುಂಬಾರರ ಮಹಾಸಭಾದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ಮಾತನಾಡಿ, ಹಿಂದುಳಿದ ಸಮುದಾಯವೂ ಹಿಂದುಳಿದ ಎಂಬ ಅಣೆಪಟ್ಟಿಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಹಿಂದುಳಿದ ವರ್ಗದ ಸಾಲಿನಲ್ಲಿ ೯೫ಕ್ಕೂ ಹೆಚ್ಚು ಜಾತಿಗಳನ್ನು ಸೇರಿಸಿ ನಮಗೆ ನಿರಂತರವಾಗಿ ವಂಚನೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಈ ವಂಚನೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಪ್ರವರ್ಗ -೧ ಹಾಗೂ ೨ಎ ಮಾಡಿದಂತೆ ೨ಬಿ, ಹಾಗೂ ೨ಸಿ ಎಂಬ ಹೊಸ ವರ್ಗವನ್ನು ಮಾಡಬೇಕು. ಈ ವರ್ಗದಲ್ಲಿ ಹಿಂದುಳಿದ ಸಮುದಾಯದ ಉನ್ನತರಾವರನ್ನು ಒಂದು ವರ್ಗಕ್ಕೆ, ಮಧ್ಯಮ ಹಾಗೂ ಕೆಳ ವರ್ಗವನ್ನು ಬೇರ್ಪಡಿಸಿ ಮೀಸಲಾತಿ ನೀಡಬೇಕು. ಇದರಿಂದ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಮೀಸಲಾತಿ ಪಡೆಯಬಹುದು ಎಂದು ತಿಳಿಸಿದರು.
ಪದಾಧಿಕಾರಿಗಳ ಘೋಷಣೆ: ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶಶಿಕಲಾ ಶಿವಕುಮಾರ್ ಚೌಡಶೆಟ್ಟಿ ಆಯ್ಕೆಯಾದರು. ಗೌರವಾಧ್ಯಕ್ಷೆ ಯಾಗಿ ಪವಿತ್ರ ಪ್ರಭಾಕರ್ ರೆಡ್ಡಿ, ಉಪಾಧ್ಯಕ್ಷೆಯಾಗಿ ಅರ್ಪಿತಾ, ಪದಾಧಿಕಾರಿಗಳಾಗಿ ಶೃತಿ, ರುಕ್ಮಿಣಿ, ಮಂಜುಳಾ, ಆಯ್ಕೆಯಾಗಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ್, ನಿತ್ಯಾಭರಣ ಚೌಡಶೆಟ್ಟಿ, ರಂಗಪ್ಪ, ಡಾ.ನಾಗರಾಜ್ ಮಾಲೂರು, ಜನಾರ್ಧನ್ ಸೇರಿದಂತೆ ಹಲವರು ಭಾಗವಹಿಸಿದ್ದರು.


























