ಕಲಬುರಗಿ :ಅ.8: ಭಾರತೀಯ ವಾಯು ಸೇನೆಯು ಭಾರತೀಯ ಸಶಸ್ತ್ರ ಪಡೆಗಳ ನಿರ್ಣಾಯಕ ಅಂಗವಾಗಿದೆ. ದೇಶ ರಕ್ಷಣೆಯಲ್ಲಿ, ದೇಶದ ಶೌರ್ಯದ ಸಂಕೇತವಾಗಿರುವ ವಾಯುಸೇನೆಯ ಪಾತ್ರ ಅಪಾರ. ಆಪರೇಷನ್ ಸಿಂಧೂರ ಯಶಸ್ಸಿನಲ್ಲಿ ವಾಯುಪಡೆಯ ಪಾತ್ರ ಅಪಾರವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ’93ನೇ ರಾಷ್ಟ್ರಿಯ ವಾಯುಪಡೆ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು. 1932ರ ಅ.8ರಂದು ಭಾರತೀಯ ವಾಯುಪಡೆಯ ಸಂಸ್ಥೆ ಪ್ರಾರಂಭಿಸಲಾಯಿತು. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರು ಮತ್ತು ಪೈಲಟ್‍ಗಳನ್ನು ಸ್ಮರಿಸುವುದು ಅಗತ್ಯವಾಗಿದೆ. 1933ರಲ್ಲಿ ಕೇವಲ ಆರು ಅಧಿಕಾರಿಗಳು ಮತ್ತು 19 ಯೋಧರೊಂದಿಗೆ ಪ್ರಾರಂಭವಾದ ಭಾರತೀಯ ವಾಯುಪಡೆ ಇಂದು ವಿಶ್ವದ ನಾಲ್ಕನೇ ಪ್ರಬಲ ವಾಯುಸೇನೆಯಾಗಿ ಬೆಳಿದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇತ್ತೀಚಿಗಷ್ಟೇ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ನಡೆಸುವ ಮೂಲಕ ನಾವೆಷ್ಟು ಬಲಿಷ್ಠರು ಎಂಬುದನ್ನು ಜಗತ್ತಿಗೆ ತಿಳಿಸಿದೆ. ಭಾರತೀಯ ವಾಯುಪಡೆಯು ಇಂದು 1,700 ಕ್ಕೂ ಹೆಚ್ಚು ವಿಮಾನಗಳು ಮತ್ತು 1.4 ಲಕ್ಷ ಸಿಬ್ಬಂದಿಯನ್ನು ಹೊಂದಿದೆ. ಸುಖೋಯ್-30 ಎಂಕೆಐ, ರಫೇಲ್, ಮಿರಾಜ್-2000 ಮತ್ತು ಶತ್ರುಗಳನ್ನು ಬೆದರಿಸುವ ಸ್ಥಳೀಯ ತೇಜಸ್‍ನಂತಹ ಆಧುನಿಕ ಯುದ್ಧ ವಿಮಾನಗಳನ್ನು ಹೊಂದಿದೆ. ಅನೇಕ ಯುದ್ಧಗಳಲ್ಲಿ ಭಾರತ ಜಯ ಸಾಧಿಸಿದೆ ಎಂದರು. ಕಾರ್ಯಕ್ರಮದಲ್ಲಿ ದತ್ತು ಹಡಪದ, ಶಿವಯೋಗೆಪ್ಪಾ ಎಸ್. ಬಿರಾದಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

























