
ಅಫಜಲಪುರ: ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ರಾಜಕೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದ ಬಳಿಕ, ಅವರು ಭಾಷಣ ಮಾಡಿದ ಸ್ಥಳವನ್ನು ಹೋಮ-ಹವನ ನಡೆಸಿ ‘ಶುದ್ಧೀಕರಿಸುವ’ ಪ್ರಯತ್ನ ಮಾಡಿರುವುದು ಜಾತಿವಾದಿ ಮನೋಭಾವದ ಪ್ರತೀಕವಾಗಿದ್ದು, ಇದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಮಾಜ ತೀವ್ರವಾಗಿ ಖಂಡಿಸುತ್ತದೆ.
ಈ ಕುರಿತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಅಫಜಲಪುರ ತಾಲೂಕು ಘಟಕದ ಹಾಗೂ ದಲಿತ ಬಲಗೈ ಸಮಾಜ ತಾಲೂಕು ಸಮಿತಿ ಜಂಟಿಯಾಗಿ ರಾಜ್ಯಪಾಲರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿ, ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಜಾತಿಯ ಹಿನ್ನೆಲೆಯನ್ನು ಆಧರಿಸಿ ವ್ಯಕ್ತಿಯೊಬ್ಬರು ಬಳಸಿದ ಸಾರ್ವಜನಿಕ ಸ್ಥಳವನ್ನು ‘ಅಶುದ್ಧ’ವೆಂದು ಬಿಂಬಿಸಿ ಅದನ್ನು ಧಾರ್ಮಿಕ ಆಚರಣೆಯ ಮೂಲಕ ‘ಶುದ್ಧೀಕರಿಸುವುದು’ ಸಂವಿಧಾನದ ಸಮಾನತೆ, ಸ್ವಾತಂತ್ರ್ಯ, ಮಾನವ ಘನತೆ ಹಾಗೂ ಜಾತಿ ತಾರತಮ್ಯ ನಿರ್ಮೂಲನೆಯ ಆಶಯಗಳಿಗೆ ವಿರುದ್ಧವಾದ ಈ ಘಟನೆ ಇಡೀ ಮಾನವ ಕುಲಕ್ಕೆ ಅಪಮಾನ ಮಾಡಿದೆ.
ಇಂತಹ ಕೃತ್ಯಗಳು ಸಮಾಜದಲ್ಲಿ ಜಾತಿ ಆಧಾರಿತ ದ್ವೇಷ, ಅಸಮಾನತೆ ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳೊಂದಿಗೆ ಭಿನ್ನಾಭಿಪ್ರಾಯ ಹೊಂದುವುದು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆಯಾಗಿದ್ದರೂ, ಜಾತಿಯ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸುವುದು ಅಥವಾ ಅವರು ಬಳಸಿದ ಸ್ಥಳವನ್ನು ಅಪವಿತ್ರವೆಂದು ಬಿಂಬಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಮುಖಂಡರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು. ಜಾತಿ ಆಧಾರಿತ ಅವಹೇಳನ, ದ್ವೇಷ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಾಂವಿಧಾನಿಕ ಮೌಲ್ಯಗಳು ಹಾಗೂ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಮಹಾಲಿಂಗ ಅಂಗಡಿ, ದಲಿತ ಸಮಾಜದ ತಾಲೂಕು ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ಡಾ.ಶಾಂತಮಲ್ಲಪ್ಪ ಹೊನ್ನುಂಗರ್, ರವಿ ಗೌರ, ಶಾಮ ಹೊಸ್ಮನಿ, ಭಾಗಣ್ಣ ಕೊಳ್ಳಿ,ಶಿವಯೋಗಿ ಸಿಂಗೆ, ಚಂದ್ರಕಾಂತ ಬನಸೋಡೆ, ಕುಪೇಂದ್ರ ತೆಲ್ಲುಣಗಿ, ಶೆಟ್ಟಪ್ಪ ಬಡದಾಳ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

































