ಅದ್ದೂರಿ ಸುವರ್ಚಲಾಂಜನೇಯ ಸ್ವಾಮಿ ೪೦ನೇ ಬ್ರಹ್ಮರಥೋತ್ಸವ

ಪಾವಗಡ, ಮೇ ೨೪- ತಾಲ್ಲೂಕಿನ ಸಂಕಾಪುರದ ಪ್ರಸಿದ್ಧ ಸುವರ್ಚಲಾಂಜನೇಯ ಸ್ವಾಮಿಯ ದೇವಾಲಯದಲ್ಲಿ ೪೦ನೇ ಬ್ರಹ್ಮರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.


ಬೆಳಗ್ಗೆಯೇ ಕಲಶಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಎಲೆಪೂಜೆ, ಹೂವಿನ ಅಲಂಕಾರ, ದತ್ತಾತ್ರೇಯ ಹೋಮ, ಅಶ್ವತ್ಥ್‌ನಾರಾಯಣ ಹೋಮ, ಆಂಜನೇಯ ಮೂಲ ಮಂತ್ರ ಹೋಮ, ಆಯುಷ್ಯಹೋಮ ಮತ್ತು ರಥಾಗಮವಾಸ್ತು ಹೋಮಗಳನ್ನು ನೆರವೇರಿಸಿ ಮಧ್ಯಾಹ್ನದ ಹೊತ್ತಿನಲ್ಲಿ ಪೂರ್ಣಾಹುತಿ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ಭಕ್ತಿ ಭಾವನೆ ತುಂಬಿದ ವಾತಾವರಣದಲ್ಲಿ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ರಥೋತ್ಸವವನ್ನು ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.


ರಥೋತ್ಸವದಲ್ಲಿ ಭಾಗವಹಿಸಿದ್ದ ಧರ್ಮಾಧಿಕಾರಿ ಎಂ.ಡಿ. ಅನಿಲ್‌ಕುಮಾರ್ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಈ ಕ್ಷೇತ್ರದಲ್ಲಿ ಹಲವಾರು ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಸಕಲ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾ ಬಂದಿದ್ದು ಎಲ್ಲ ಭಕ್ತರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.


ಬೆಂಗಳೂರಿನ ಖ್ಯಾತ ಜ್ಯೋತಿಷಿ ಡಾ. ಕುಮಾರ್ ವಸಿಷ್ಠ ಮಾತನಾಡಿ, ಶನಿ ದೋಷ, ರಾಹು, ಕೇತು ದೋಷಗಳಿಗೆ ಈ ಕ್ಷೇತ್ರವು ನಿವಾರಣೆ ಮಾಡುವಂತಹ ಕ್ಷೇತ್ರವಾಗಿದ್ದು, ವಿಶೇಷವಾಗಿ ಆಂಜನೇಯಸ್ವಾಮಿ, ಪತ್ನಿ ಸುವರ್ಚಲಾದೇವಿ ಸಮೇತ ನೆಲೆಸಿದ್ದು, ಈ ಕ್ಷೇತ್ರದಲ್ಲಿ ಸೂರ್ಯನ ಅನುಗ್ರಹವು ಸಹ ಲಭಿಸುತ್ತದೆ. ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಇಷ್ಟಾರ್ಥ ಕೋರಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಭಕ್ತರಿಗೆ ಕರೆ ನೀಡಿದ್ದಾರೆ.


ರಥೋತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ನಿರ್ದೇಶಕರಾದ ಎಂ. ಎಸ್. ವಿಶ್ವನಾಥ್, ರವಿ ನರಸಿಂಹನ್, ಪತ್ರಕರ್ತರಾದ ಜಯಸಿಂಹ, ಎಂ.ಡಿ. ಶ್ರೀನಾಥ್, ರಂಗಣ್ಣ, ಪೆನುಕೊಂಡ ಪ್ರಸಾದ್, ಡಾ. ಎಸ್. ರಮೇಶ್ ಸುಕಂ ರಾಘವೇಂದ್ರ, ಸುಕಂ ಕಾರ್ತಿಕ್, ಗುತ್ತಿಗೆದಾರ ದುರ್ಗಪ್ಪ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.