Home ಜಿಲ್ಲೆ 12ನೇ ಶತಮಾನದ ಕಲ್ಯಾಣ ಕ್ರಾಂತಿಯೇ ಸಮಾನತೆಯ ನಿಜವಾದ ಸಂಕೇತ: ಪೂಜ್ಯ ಡಾ.ಗಂಗಾಂಬಿಕೆ ಅಕ್ಕ

12ನೇ ಶತಮಾನದ ಕಲ್ಯಾಣ ಕ್ರಾಂತಿಯೇ ಸಮಾನತೆಯ ನಿಜವಾದ ಸಂಕೇತ: ಪೂಜ್ಯ ಡಾ.ಗಂಗಾಂಬಿಕೆ ಅಕ್ಕ

ಬೀದರ್: 12ನೇ ಶತಮಾನದ ಕಲ್ಯಾಣ ಕ್ರಾಂತಿಯೇ ಸಮಾನತೆಯ ನಿಜವಾದ ಸಂಕೇತವೆಂದು ಬಸವ ಸೇವಾ ಪ್ರತಿಷ್ಟಾನದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ನುಡಿದರು.
ಬುಧವಾರ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಸಭಾಂಗಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ (ಬೆಂಗಳೂರು) ಹಾಗೂ ಕರ್ನಾಟಕ ಸಾಹಿತ್ಯ ಸಂಘ (ಬೀದರ) ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ‘ಬೀದರ ಜಿಲ್ಲಾ ನಾಟಕೋತ್ಸವ’ದ ಎರಡನೇ ದಿನದ ‘ಮಹಾಕ್ರಾಂತಿ’ ನಾಟಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
“ವಿಶ್ವದ ಇತಿಹಾಸದಲ್ಲಿ ಫ್ರಾನ್ಸ್ ಕ್ರಾಂತಿಯನ್ನು ‘ತಾಯಿ ಕ್ರಾಂತಿ’ ಎಂದು ಕರೆಯಲಾಗುತ್ತದೆ. ಆದರೆ, 18ನೇ ಶತಮಾನದ ಫ್ರಾನ್ಸ್ ಕ್ರಾಂತಿ ಹಾಗೂ 19ನೇ ಶತಮಾನದ ಅಮೆರಿಕನ್ ಕ್ರಾಂತಿಗಳಿಗಿಂತಲೂ ಮುಂಚಿತವಾಗಿಯೇ, 12ನೇ ಶತಮಾನದಲ್ಲಿಯೇ ಕಲ್ಯಾಣ ಕ್ರಾಂತಿಯ ಮೂಲಕ ಮಹಿಳೆಯರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯ ನೀಡಲಾಗಿತ್ತು” ಎಂದು ಅವರು ಬಣ್ಣಿಸಿದರು.
ಸಮಾರಂಭ ಉದ್ಘಾಟಿಸಿದ ಸತ್ಯಂ ಪದವಿ ಕಾಲೇಜಿನ ಪ್ರಾಚಾರ್ಯೆ ಸುವರ್ಣಾ ಭೋಸ್ಲೆ ಮಾತನಾಡಿ, ಕಲೆ ಹಾಗೂ 12ನೇ ಶತಮಾನದ ಬಸವಣ್ಣನವರ ಕಲ್ಯಾಣ ಕ್ರಾಂತಿಯ ಮಹತ್ವವನ್ನು ಸವಿವರವಾಗಿ ಪ್ರಸ್ತಾಪಿಸಿದರು. “ಅನುಭವ ಮಂಟಪವು ಜಗತ್ತಿನ ಮೊಟ್ಟ ಮೊದಲ ಸಂಸತ್ತಾಗಿ ಕಾರ್ಯನಿರ್ವಹಿಸಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಿತ್ತು” ಎಂದು ಅವರು ಹೆಮ್ಮೆಯಿಂದ ನುಡಿದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷರಾದ ಪೆÇ್ರ. ಜಗನ್ನಾಥ ಹೆಬ್ಬಾಳೆ ಮಾತನಾಡಿ, “ಇಂದಿನ ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ನ್ಯಾಯ, ಸಮಾನತೆ ಮತ್ತು ಭ್ರಾತೃತ್ವದ ಆಶಯಗಳು 12ನೇ ಶತಮಾನದ ಶರಣರ ತತ್ವಗಳಲ್ಲೇ ಅಡಗಿದ್ದವು. ಇದನ್ನು ಸಂವಿಧಾನವು ಕಾನೂನಾತ್ಮಕವಾಗಿ ನಮಗೆ ನೀಡಿದೆ” ಎಂದು ಅಭಿಪ್ರಾಯಪಟ್ಟರು.
ಬಯಲಾಟ ಅಕಾಡೆಮಿ ಮಾಜಿ ಸದಸ್ಯರಾದ ಡಾ.ಸಂಜುಕುಮಾರ ಜುಮ್ಮಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ಹಿಂದೆ ರಾಜ ಮಹಾರಾಜರ ಆಸ್ಥಾನಗಳಲ್ಲಿ ಕಲಾವಿದರನ್ನು, ಅಂದರೆ ಹಾಡುವವರನ್ನು, ಕುಣಿಯುವವರನ್ನು ಮತ್ತು ನಾಟಕ ಮಾಡುವವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಆದರೆ, ಆ ಕಲೆಗೂ ಒಂದು ಘನತೆ ಮತ್ತು ಗೌರವ ತಂದುಕೊಟ್ಟ ಶ್ರೇಯಸ್ಸು 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ” ಎಂದು ಅವರು ಸ್ಮರಿಸಿದರು.
ಇದೇ ವೇಳೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವ ಸ್ಥಳೀಯರಾದ ಶಂಭುಲಿಂಗ ವಾಲ್ದೊಡ್ಡಿ, ದೇವಿದಾಸ್ ಚಿಮಕೋಡೆ ಹಾಗೂ ಶೇಶಪ್ಪ ಚಿಟ್ಟಾ ತಮ್ಮ ಅನುಭವ ಹಂಚಿಕೊಂಡರು. ವಿಶ್ರಾಂತ ಪ್ರಾಧ್ಯಾಪಕ ಶಿವಾಜಿ ಭೋಸ್ಲೆ ವೇದಿಕೆಯಲ್ಲಿದ್ದರು.
ಆರಂಭದಲ್ಲಿ ಅಕ್ಕಮಹಾದೇವಿ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷೆ ಡಾ.ಸಾವಿತ್ರಿಬಾಯಿ ಹೆಬ್ಬಾಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಬೀದರ್ ಜಿಲ್ಲಾ ನಾಟಕೋತ್ಸವದ ಸಂಯೋಜಕ ವೈಜಿನಾಥ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಕಜಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಸಂತಾಜಿ ವಂದಿಸಿದರು.
ಕರ್ನಾಟಕ ಕಾಲೇಜು ಬೀದರ, ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಶಾಲೆ ಕರಡ್ಯಾಳ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಬೀದರ, ಅನುಭವ ಮಂಟಪ ಸಂಸ್ಥೆಯ ವಿದ್ಯಾಲಯ ಹಾಗೂ ಶ್ರೀ ಸತ್ಯಂ ಪದವಿ ಕಾಲೇಜುಗಳ ಸಹಯೋಗದೊಂದಿಗೆ ಈ ನಾಟಕೋತ್ಸವ ಆಯೋಜಿಸಲಾಗಿತ್ತು.