ಥಾಲ್ ಮೀಟ್ ರಾಷ್ಟ್ರೀಯ ಸಮಾವೇಶ ಯಶಸ್ವಿ

ಬೆಂಗಳೂರು, ಜ. 12- ಥಲಸೆಮಿಯಾ ಮತ್ತು ಇತರ ಹಿಮೋಗ್ಲೋಬಿನೋಪಥಿಗಳ ತಡೆ, ಚಿಕಿತ್ಸೆ ಹಾಗೂ ನಿರ್ಮೂಲನೆಗೆ ಒತ್ತು ನೀಡುವ ಉದ್ದೇಶದಿಂದ ಸಂಕಲ್ಪ್ ಇಂಡಿಯಾ ಫೌಂಡೇಷನ್ ಆಯೋಜಿಸಿದ್ದ ರಾಷ್ಟ್ರೀಯ ಪಾಲುದಾರರ ಸಮಾವೇಶ ‘ಥಾಲ್ ಮೀಟ್ ೨೦೨೬’ ವಸಂತನಗರದ ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.


ಬೆಂಗಳೂರಿನ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಗೌರವಾನ್ವಿತ ಸಂಸದರಾದ ಶ್ರೀ ಡಾ. ಸಿ. ಎನ್. ಮಂಜುನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಮುಖ ಸಂಸ್ಥೆಗಳ ಗಣ್ಯರನ್ನು ಸನ್ಮಾನಿಸಿದರು ಹಾಗೂ ಸಂಕಲ್ಪ್ ಬೆಂಬಲಿತ ಡೇಕೇರ್ ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳಲಿರುವ ಜನಜಾಗೃತಿ ಮತ್ತು ಶೈಕ್ಷಣಿಕ ಪೋಸ್ಟರ್‌ಗಳ ಸರಣಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.


ರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಮಂಜುನಾಥ್ ಅವರು, ಗರ್ಭಪೂರ್ವ ತಪಾಸಣೆ, ಸಮಾಲೋಚನೆ ಮತ್ತು ಮೊದಲ ಹಂತದ ಹಸ್ತಕ್ಷೇಪಗಳ ಮೂಲಕ ಹಿಮೋಗ್ಲೋಬಿನೋಪಥಿಗಳ ತಡೆಗಟ್ಟುವಿಕೆ ಅತ್ಯಂತ ಮಹತ್ವದ ಸಾರ್ವಜನಿಕ ಆರೋಗ್ಯ ಆದ್ಯತೆಯಾಗಬೇಕು ಎಂದು ತಿಳಿಸಿದರು. ಕ್ಯಾರಿಯರ್ ಸ್ಕ್ರೀನಿಂಗ್ ಮತ್ತು ತಡೆಗಟ್ಟುವಿಕೆ ಸೇವೆಗಳನ್ನು ಗರ್ಭಿಣಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿಸಲು ಅಗತ್ಯವಿರುವ ನೀತಿ ಕ್ರಮಗಳ ಕುರಿತು ಸಂಸತ್ ಮತ್ತು ಸಂಬಂಧಿತ ವೇದಿಕೆಗಳಲ್ಲಿ ವಿಷಯವನ್ನು ಮುಂದಿಡುವುದಾಗಿ ಅವರು ಭರವಸೆ ನೀಡಿದರು.


ಸಂಕಲ್ಪ್ ಥಲಸೆಮಿಯಾ ನಿರ್ವಹಣಾ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ೨೦ಕ್ಕೂ ಹೆಚ್ಚು ಪಾಲುದಾರ ಕೇಂದ್ರಗಳ ಪ್ರತಿನಿಧಿಗಳು ಈ ದಿನಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಕಲ್ಪ್ ಥಲಸೆಮಿಯಾ ಡೇಕೇರ್ ಸೆಂಟರ್, ಸಂಕಲ್ಪ್ ಬ್ಲಡ್ ಸೆಂಟರ್, ಮಕ್ಕಳ ಆರೈಕೆ ಗೃಹ ಮತ್ತು ಅಸ್ಥಿಮಜ್ಜೆ ಕಸಿ ಘಟಕಗಳ ಮಾರ್ಗದರ್ಶಿತ ವೀಕ್ಷಣೆ, ತಾಂತ್ರಿಕ ಅಧಿವೇಶನಗಳು, ಅನುಭವ ಹಂಚಿಕೆ ಹಾಗೂ ಪ್ರಕರಣ ಚರ್ಚೆಗಳ ಮೂಲಕ ನಿಯಮಿತ ಡೇಕೇರ್ ವ್ಯವಸ್ಥೆ, ದೃಢ ರಕ್ತ ಪೂರೈಕೆ ವ್ಯವಸ್ಥೆ, ಕೇಂದ್ರಿತ ಪ್ರಯೋಗಾಲಯ ಬೆಂಬಲ ಮತ್ತು ಮಾನಸಿಕ-ಸಾಮಾಜಿಕ ಆರೈಕೆಗಳು ರೋಗಿಗಳ ಜೀವನಮಟ್ಟವನ್ನು ಹೇಗೆ ಸುಧಾರಿಸುತ್ತವೆ ಎಂಬುದನ್ನು ವಿವರಿಸಲಾಯಿತು.