
ಬೀದರ:ಮಾ.೧೧: ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕಲ್ಪವೃಕ್ಷವಾಗಿ. ಯಾವುದೇ ಗೈಡ್‌ಗಳನ್ನು ಬಳಸದೆ ಪಠ್ಯಪುಸ್ತಕಗಳನ್ನೇ ಬಳಸಿಕೊಂಡು ಅಧ್ಯಯನ ಮಾಡಿದಾಗ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್.ಬಿರಾದಾರ ತಿಳಿಸಿದರು.
ಎ.ಎಸ್.ಆರ್ ಫಂಕ್ಷನ್ ಹಾಲ್‌ನಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಪ್ರಕಾಶನ ಮಾಡಲಾದ ಬೀದರ ವಿಶ್ವವಿದ್ಯಾಲಯದ ವಿವಿಧ ಪದವಿ ತರಗತಿಗಳ ಐದು ಪಠ್ಯಪುಸ್ತಕಗಳ ಲೋಕಾರ್ಪಣೆ ಹಾಗೂ ಐಎಎಸ್ ಪರೀಕ್ಷೆಯ ಸಂಪನ್ಮೂಲ ತಜ್ಞರಾದ ನಿಖಿಲ್ ಎನ್.ನಾವದಗೇರಿ ಅವರಿಂದ ಹಮ್ಮಿಕೊಂಡ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪಠ್ಯಪುಸ್ತಕಗಳನ್ನು ತಜ್ಞರು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ರಚಿಸಿದ್ದಾರೆ. ಪ್ರೊ. ಜಗನ್ನಾಥ ಹೆಬ್ಬಾಳೆ, ಡಾ.ಶಿವಕುಮಾರ ನಾಗವಾರ, ಡಾ. ಸುನಿತಾ ಕೂಡ್ಲಿಕರ್, ಡಾ. ಅಶೋಕ ಕೋರೆ, ಡಾ.ಎಂ.ಜಿ.ದೇಶಪಾAಡೆ, ಡಾ. ಹೇಮಲತಾ ವಡ್ಡೆ ಅತ್ಯುತ್ತಮ ಗ್ರಂಥಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಿದ್ದಾರೆ. ಅವುಗಳನ್ನು ಮಕ್ಕಳು ಅಧ್ಯಯನ ಮಾಡಬೇಕು. ಪ್ರಕಾಶನಗೈದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಅಲ್ಲದೇ ೧೬ ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣ ಉಪಯೋಗಿಸಬಾರದೆಂದು ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಉಪಯುಕ್ತ ವೆಬ್‌ಸೈಟ್‌ಗಳನ್ನು ಸದುಪಯೋಗ ಪಡೆದುಕೊಂಡು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ಮಾತನಾಡಿ ಆರ್.ವಿ.ಬಿಡಪ್, ಹಣದಿ, ಸರ್ವಜ್ಞನ ತ್ರಿಪದಿಗಳು, ಆಧುನಿಕ ಸಾಹಿತ್ಯ ಸಂಗ್ರಹ. ಕಲ್ಯಾಣ ಕರ್ನಾಟಕದ ಕಥೆಗಳು ಈ ಐದು ಕೃತಿಗಳನ್ನು ಬೀದರ ವಿ.ವಿ.ಯ ಪಠ್ಯಪುಸ್ತಕಗಳಾಗಿವೆ. ಇವು ಅತ್ಯಂತ ಮೌಲ್ಯಿಕ ಕೃತಿಗಳು. ಇವುಗಳನ್ನು ಅಧ್ಯಯನ ಮಾಡುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಸದ್ಬಳಕೆ ಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರಯತ್ನ ಮಾಡಿ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಹೇಳಿದರು.
ಐಎಎಸ್ ಪರೀಕ್ಷೆಯ ಸಂಪನ್ಮೂಲ ತಜ್ಞ ನಿಖಿಲ್ ಎನ್.ನಾವದಗೇರಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶೃದ್ಧೆಯಿಂದ ಅಧ್ಯಯನ ಮಾಡಿ, ಅದಕ್ಕೆ ತಕ್ಕಂತೆ ಪರಿಶ್ರಮಪಟ್ಟು, ಆತ್ಮವಿಶ್ವಾಸದಿಂದ ಪರೀಕ್ಷೆಗಳನ್ನು ಬಿಡಿಸಿ ಗುರಿ ತಲುಪಬೇಕು. ಪಾಲಕರ ಶ್ರಮ ಕಡೆಗಣಿಸದೆ, ಗುರುವಿನ ಆಜ್ಞೆ ಮೀರದೆ, ಸಾಮಾಜಿಕ ಜಾಲತಾಣ ಹೆಚ್ಚು ಬಳಸದೆ ಗುರಿಗೆ ಬೆನ್ಹತ್ತಿದಾಗ ಅಂದುಕೊAಡ ಮಜಲು ತಲುಪಲು ಸಾಧ್ಯವಾಗುತ್ತದೆ ಎಂದರು.
ಇದೇ ವೇಳೆ ಬೀದರ ವಿ.ವಿ.ಯ ಐದು ಪಠ್ಯಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು. ವೇದಿಕೆ ಮೇಲೆ ನಟ ನಿರ್ದೇಶಕ ವಿಷ್ಣುಕಾಂತ ಬಿ.ಜೆ., ಹಿರಿಯ ಸಾಹಿತಿ ಡಾ.ಶಿವಕುಮಾರ ನಾಗವಾರ, ಕನಕ ಪ್ರಶಸ್ತಿ ಪುರಸ್ಕೃತ ಡಾ. ರವೀಂದ್ರ ಲಂಜವಾಡಕರ್, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಡಾ. ಅಶೋಕ ಕೋರೆ, ಮಹಾರುದ್ರ ಡಾಕುಳಗಿ ಉಪಸ್ಥಿತರಿದ್ದರು.
ಎಸ್.ಬಿ.ಕುಚಬಾಳ ನಾಡಗೀತೆ ನಡೆಸಿಕೊಟ್ಟರು. ಡಾ. ಸುನಿತಾ ಕೂಡ್ಲಿಕರ್ ನಿರೂಪಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ನಿಜಲಿಂಗಪ್ಪ ತಗಾರೆ ವಂದಿಸಿದರು. ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.




















