ಟ್ರಂಪ್ -ಮಸ್ಕ್ ಮುಸುಕಿನ ಗುದ್ದಾಟ ಟೆಸ್ಲಾ ಷೇರು ಕುಸಿತ

ವಾಷಿಂಗ್ಟನ್,ಜೂ.೬- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲೋನ್ ಮಸ್ಕ್ ನಡುವಿನ ಜಗಳ ಹಾದಿ ರಂಪ ಬೀದಿ ರಂಪವಾದ ಬೆನ್ನಲ್ಲೇ ಟೆಸ್ಲಾ ಕಂಪನಿಯ ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಡೊನಾಲ್ಡ್ ಟ್ರಂಪ್ ಮತ್ತು ಎಲನ್ ಮಸ್ಕ್ ನಡುವಿನ ಟ್ವಿಟ್ಟರ್ ವಾರ್ ಹೆಚ್ಚಾಗುತ್ತಿದ್ದಂತೆ ಟೆಸ್ಲಾ ಷೇರು ಮೌಲ್ಯ ದಾಖಲೆಯ ಶೇಕಡಾ ೧೪ ರಷ್ಟು ಕುಸಿತವಾಗಿದೆ. ಒಂದೇ ದಿನ ಒಂದು ಷೇರಿನ ಮೌಲ್ಯ ೪೭ ಡಾಲರ್ ಇಳಿದಿದ್ದು ಕಳೆದ ೫ ದಿನಗಳಲ್ಲಿ ೭೦ ಡಾಲರ್ ಇಳಿಕೆಯಾಗಿದೆ.

ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ಮಸೂದೆ ತರಲು ಉದ್ದೇಶಿಸಿರುವುದನ್ನು ವಿರೋಧಿಸಿ ಸಾರ್ವಜನಿಕ ದಕ್ಷತೆ ವಿಭಾಗದ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದ ಬಳಿಕ ಡೊನಾಲ್ಡ್ ಟ್ರಂಪ್ ಮತ್ತು ಎಲನ್ ಮಸ್ಕ್ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ.

ಈ ನಡುವೆ ಪ್ರತಿಕ್ರಿಯಿಸಿರುವ ಎಲನ್ ಮಸ್ಕ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಉಚ್ಚಾಟಿಸಿ ಉಪಾಧ್ಯಕ್ಷ ಜೆಡಿ ವಾನ್ಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ನೀಡಿದ ಹೇಳಿಕೆ ಇಬ್ಬರು ಸ್ನೇಹಿತರ ನಡುವೆ ವಾಕ್ಸಮರ , ಆರೋಪ ಪ್ರತ್ಯಾರೋಪ ಹೆಚ್ಚಾಗಿದೆ.

ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ ಉದ್ಯಮಿ ಎಲನ್ ಮಸ್ಕ್ ಅವರ ಟೆಸ್ಲಾ ಕಂಪನಿ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಒಪ್ಪಂದಗಳನ್ನು ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಕಂಪನಿಯ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿತ ಕಂಡಿದೆ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಜಾರಿಗೆ ತರಲು ಮುಂದಾಗಿರುವ ತೆರಿಗೆ ಮಸೂದೆ ಹೆಚ್ಚು ನಷ್ಠಕ್ಕೆ ಕಾರಣವಾಗಲಿದೆ ಎಂದು ಆಗಿನ ಸಾರ್ವಜನಿಕ ಆಡಳಿತ ದಕ್ಷತೆ ವಿಭಾಗದ ಮುಖ್ಯಸ್ಥ ಎಲನ್ ಮಸ್ಕ್ ಹೇಳಿದ್ದರು.ಇದಕ್ಕೆ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾದಲ್ಲಿ ಬಹುದೊಡ್ಡ ಸುಧಾರಣೆಗೆ ಈ ಮಸೂದೆ ಸಹಕಾರಿಯಾಗಲಿದ ಎಂದು ಸಮರ್ಥಿಸಿಕೊಂಡಿದ್ದರು.

ಇದರು ಇಬ್ಬರು ನಾಯಕರ ನಡುವೆ ಆರೋಪ ಪ್ರತ್ಯಾರೋಪ ಮತ್ತು ವಯಕ್ತಿಕವಾಗಿ ಹಳೆಯ ಭಾವಚಿತ್ರಗಳನ್ನು ಪ್ರಕಟಿಸುವ ಹಂತಕ್ಕೆ ಬೆಳೆದಿದೆ.

ದಿನದಿಂದ ದಿನಕ್ಕೆ ಎಲನ್ ಮಸ್ಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ಟ್ವೀಟ್ ಮಾಡಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕೆರಳಿ ಕೆಂಡವಾಗಿರುವ ಡೊನಾಲ್ಡ್ ಟ್ರಂಪ್, ಟೆಸ್ಲಾ ಕಂಪನಿಯ ಜೊತೆ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡುವುದಾಗಿ ಗುಡುಗಿದ್ಧಾರೆ

ಇದರ ಜೊತೆಗೆ ಎಲನ್ ಮಸ್ಕ್ ಅವರ ಇಂಟರ್ನೆಟ್ ಕಂಪನಿ ಸ್ಟಾರ್‍ಲಿಂಕ್ ಮತ್ತು ರಾಕೆಟ್ ಕಂಪನಿ ಸ್ಪೇಸ್‌ಎಕ್ಸ್‌ನ ಆದಾಯಕ್ಕೆ ಕೊಕ್ಕೆ ಹಾಕುವುದಾಗಿ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.ಬಜೆಟ್‌ನಲ್ಲಿ ಹಣವನ್ನು ಉಳಿಸಲು ಸುಲಭವಾದ ಮಾರ್ಗವೆಂದರೆ ಎಲನ್ ಮಸ್ಕ್ ಜೊತೆ ಮಾಡಿಕೊಂಡಿದ್ದ ಸರ್ಕಾರಿ ಸಬ್ಸಿಡಿಗಳು ಮತ್ತು ಒಪ್ಪಂದ ರದ್ದುಗೊಳಿಸುತ್ತೇನೆ ಎಂದಿದ್ದಾರೆ