ಉಗ್ರ ಉಮರ್ ಮನೆ ಧ್ವಂಸ

ಶ್ರೀನಗರ,ನ.೧೪- ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದ ಶಂಕಿತ ಆರೋಪಿ ಡಾ. ಉಮರ್ ನಬಿ ಅವರ ಮನೆಯನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಧ್ವಂಸಗೊಳಿಸಿ ಭಯೋತ್ಪಾದಕರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ

ಕೆಂಪುಕೋಟೆ ಬಳಿ ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದು ಉಮರ್ ನಬಿ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ. ಹುಂಡೈ ಐ-೨೦ ಕಾರಿನಲ್ಲಿ ದೊರೆತ ದೇಹದ ಭಾಗಗಳನ್ನು ಉಮರ್ ತಾಯಿಯ ಡಿಎನ್‌ಎ ಜತೆ ಪರೀಕ್ಷಿಸಿದ ಬಳಿಕ ಅದು ಸ್ಪಷ್ಟವಾಗಿದೆ.


ಸ್ಪೋಟದ ವೇಳೆ ಕಾರಿನಲ್ಲಿ ಉಮರ್ ಒಬ್ಬನೇ ಇದ್ದ ಎಂಬುದನ್ನೂ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಶಂಕಿತ ಉಗ್ರನ ಮನೆಯನ್ನು ಭದ್ರತಾ ಪಡೆಗಳು ದ್ವಂಸ ಮಾಡುವ ಮೂಲಕ ಭಯೋತ್ಪಾದನೆ ಚಟುವಟಿಕೆಗೆ ಕುಮಕ್ಕು ನೀಡುವ ಮಂದಿಗೆ ನೇರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ


ನ.೧೦ರಂದು ಕೆಂಪು ಕೋಟೆ ಸಮೀಪದಲ್ಲಿ ಸಂಭವಿಸಿದ್ದ ಕಾರು ಸ್ಫೋಟದಲ್ಲಿ ೧೩ ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡ ಮಂದಿ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಲವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.


ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಸೇರಿದಂತೆ ಇನ್ನಿತರೆ ತನಿಖಾ ಸಂಸ್ಥೆಗಳು ಜೊತೆಯಾಗಿ ತನಿಖೆ ಕೈಗೊಂಡಿವೆ
೬ ಮಂದಿ ಬಂಧನ


ದೆಹಲಿ ಸ್ಫೋಟದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿ, ಡಾ. ಉಮರ್ ಅವರ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ.

ಫರಿದಾಬಾದ್ ಭಯೋತ್ಪಾದಕ ಘಟಕ ಪತ್ತೆಯಾದ ನಂತರ ಬಂಧಿಸಲ್ಪಟ್ಟ ಕಾಶ್ಮೀರದ ಇತರ ಇಬ್ಬರು ವೈದ್ಯರೊಂದಿಗೆ ಉಮರ್ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದು ಇದರಲ್ಲಿ ೨,೯೦೦ ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಫೋಟ ಸ್ಥಳದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳು ಅವರ ತಾಯಿಯ ಡಿಎನ್‌ಎ ಮಾದರಿಗಳೊಂದಿಗೆ ಹೊಂದಿಕೆಯಾದ ನಂತರ ಉಮರ್ ಅವರ ಗುರುತು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಗರದ ಮನೆಯನ್ನು ಧ್ವಂಸ ಮಾಡಲಾಗಿದೆ.

ಒಂದು ಕಾಲದಲ್ಲಿ ಸಮುದಾಯದಲ್ಲಿ ಪ್ರತಿಭಾನ್ವಿತ ವೈದ್ಯ ಎಂದು ಪರಿಗಣಿಸಲ್ಪಟ್ಟ ಉಮರ್, ಕಳೆದ ಎರಡು ವರ್ಷಗಳಿಂದ ಕಠಿಣ ನಂಬಿಕೆಗಳ ಕಡೆಗೆ ತಿರುಗಿದಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ತುಂಬಿದ ಹುಂಡೈ ಐ೨೦ ಅನ್ನು ಚಾಲನೆ ಮಾಡುತ್ತಿದ್ದ ಡಾ. ಉಮರ್ ನಬಿ, ಡಾ. ಮುಜಮ್ಮಿಲ್ ಅಹ್ಮದ್ ಗನೈ ಮತ್ತು ಡಾ. ಶಾಹೀನ್ ಶಾಹಿದ್ ಅವರೊಂದಿಗೆ ಮೂವರು ಶಂಕಿತರು ಸ್ಪೋಟ ನಡೆಸಲು ಸ್ವಿಟ್ಜರ್‌ಲ್ಯಾಂಡ್ ಮೂಲದ ಎನ್‌ಕ್ರಿಪ್ಟ್ ಮಾಡಿದ ವೇದಿಕೆ ಥ್ರೀಮಾವನ್ನು ಅವಲಂಭಿಸಿದ್ದರು ಎಂದು ಹೇಳಿದ್ದಾರೆ.