
ಮಧುಗಿರಿ, ನ. ೨೯- ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ವಿಶಿಷ್ಟ ಸ್ಥಾನಮಾನವಿದ್ದು, ಇವುಗಳು ಶಾಂತಿ ಹಾಗೂ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.
ತಾಲ್ಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಶನಿಮಹಾತ್ಮ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ದಿನನಿತ್ಯ ಕಾರ್ಯದಲ್ಲಿ ಒತ್ತಡ ಜೀವನ ಜಂಜಾಟದಿಂದ ನೆಮ್ಮದಿ ಹೊಂದಲು ದೇವರಿಗೆ ಮೊರೆ ಹೋಗಬೇಕು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೇವರಿಗೆ ಪೂಜೆ ಸಲ್ಲಿಸಿ ಸಿದ್ಧಿ, ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ದೇವರಿಗೆ ಪೂಜೆ ಮಾಡಿ ಪ್ರಾರ್ಥಿಸಬೇಕು ಎಂದರು.
ಧರ್ಮಾಚರಣೆಯಿಂದ ಮಾತ್ರ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿಲ್ಲ. ಮಾನವರು ಸಂಸ್ಕಾರವಂತ ನಾಗುವುದರ ಜತೆಗೆ ಜನ್ಮ ನೀಡಿದ ತಂದೆ-ತಾಯಿಯನ್ನು ದೇವರ ಸ್ಥಾನದಲ್ಲಿ ಕಾಣಬೇಕು. ನಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಸ್ಮರಿಸಿಕೊಳ್ಳುವ ಪರಿಪಾಠವನ್ನು ಅಳವಡಿಸಿಕೊಳ್ಳಬೇಕು ಎಂದರು.
ದೇವರಿಗೆ ಗುಡಿ ನಿರ್ಮಿಸಿ ದೇವಸ್ಥಾನ ಕಟ್ಟಿ ಪೂಜಿಸಿದರೆ ಸಾಲದು, ದೇವಾಲಯಗಳ ಪಾವಿತ್ರ್ಯತೆಯನ್ನು ಉಳಿಸುವುದರೊಂದಿಗೆ ನಿತ್ಯ ಪೂಜೆ, ಸೇವೆ ಮಾಡಬೇಕು ಎಂದರು.




























