ಬೆಂಗಳೂರು, ಅ. ೩೦- ಬೆಂಗಳೂರಿನ ಸುರಂಗ ರಸ್ತೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಸಂಸದ ತೇಜಸ್ವಿಸೂರ್ಯ ಇನ್ನೂ ಎಳಸು. ಅವರೊಬ್ಬ ವೆಸ್ಟ್ ಮೆಟಿರಿಯಲ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿಂದು ಕೇಂದ್ರದ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ನೇತೃತ್ವದಲ್ಲಿ ನಡೆದಿರುವ ದಕ್ಷಿಣಭಾರತ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಗರಾಭಿವೃದ್ಧಿ ಸಚಿವರ ಪ್ರಾದೇಶಿಕ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ೧ ಕೋಟಿ ೩೦ ಲಕ್ಷ ವಾಹನಗಳಿವೆ. ಎಲ್ಲರೂ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಲು ಸಾಧ್ಯವಿಲ್ಲ. ಇದನ್ನು ತೇಜಸ್ವಿ ಸೂರ್ಯ ಅರ್ಥ ಮಾಡಿಕೊಳ್ಳಬೇಕು. ನಾನು ಅವರು ಸಂಸದರು ಎಂಬ ಕಾರಣಕ್ಕೆ ಅವರನ್ನು ಕರೆಸಿ ಮಾತನಾಡಿದೆ ಆದರೆ ಅವರು ಏನೆನೋ ಮಾತನಾಡುತ್ತಾರೆ. ಇದು ಸರಿಯಲ್ಲ ಎಂದರು.
ಸುರಂಗ ರಸ್ತೆಗೆ ವಿರೋಧ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ ಅವರು ಕಾರಿನಲ್ಲಿ ಏಕೆ ಓಡಾಡುತ್ತಾರೆ. ಅವರು ಮೆಟ್ರೋ, ಬಿಎಂಟಿಸಿ ಬಸ್, ಆಟೋ ರಿಕ್ಷಾಗಳಲ್ಲಿ ಓಡಾಡಲಿ ನೋಡೋಣ ಎಂದು ಸವಾಲು ಹಾಕಿದ ಅವರು, ಬೆಂಗಳೂರಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸುರಂಗ ರಸ್ತೆ ಬೇಡ ಎಂದು ಹೇಳಲು ಯಾರು. ಕೇಂದ್ರ ಸಚಿವರಾಗಿ ಬೇಕಾದರೆ ದೇಶದಲ್ಲಿ ಸುರಂಗ ರಸ್ತೆಗಳೇ ಬೇಡ ಎಂದು ಒಂದು ನಿರ್ಣಯ ಹೊರಡಿಸಲಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿಸೂರ್ಯ ವೆಸ್ಟ್ ಮೆಟಿರಿಯಲ್ ಅವರ ಪ್ರಶ್ನೆಗೆ ನಾನು ಉತ್ತರಿಸಲ್ಲ. ಬಿಜೆಪಿಯ ಕೆಲ ಹಿರಿಯ ನಾಯಕರುಗಳಾದ ಆರ್. ಅಶೋಕ್, ಅಶ್ವತ್ಥ್‌ನಾರಾಯಣ, ಜಗದೀಶ್‌ಶೆಟ್ಟರ್ ಇವರೆಲ್ಲಾ ಪ್ರಶ್ನೆ ಕೇಳಲಿ ಉತ್ತರಿಸುತ್ತೇನೆ. ಅವರಿಗೆ ಸುರಂಗ ರಸ್ತೆ ಅಗತ್ಯತೆ ಅರ್ಥವಾಗಿದೆ ಎಂದರು.
ಕೇಂದ್ರದಿಂದ ಹಣ ತರದೆ ತೇಜಸ್ವಿ ಸೂರ್ಯ ಏನೆನೋ ಮಾತನಾಡುವುದು ಬೇಡ. ಮೆಟ್ರೋ ಕಾಂಗ್ರೆಸ್ ಕಾಲದಲ್ಲಿ ಆಗಿದ್ದು, ಇದಕ್ಕೆ ಮೆಟ್ರೋಗೆ ಎಷ್ಟು ಹಣ ಕೊಡುತ್ತಿದೆ ಎಂದು ಹೇಳಿದರು.
ಹೆಚ್ಚಿನ ಹಣಕ್ಕೆ ಬೇಡಿಕೆ
ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ನೇತೃತ್ವದಲ್ಲಿ ನಡೆದ ದಕ್ಷಿಣ ರಾಜ್ಯ ನಗರಾಭಿವೃದ್ಧಿ ಸಚಿವರ ಸಭೆಯಲ್ಲಿ ಬೆಂಗಳೂರು ಸೇರಿದಂತೆ ದಕ್ಷಿಣ ರಾಜ್ಯಗಳ ವಿವಿಧ ನಗರ, ಪಟ್ಟಣಗಳ ಅಭಿವೃದ್ಧಿಗೆ ಹೆಚ್ಚಿನ ಹಣ ಕೊಡುವಂತೆಕೋರಿದ್ದೇನೆ. ಮಾತು ಕತೆಗಳು ನಡೆದಿವೆ. ಸಭೆಯ ಕೊನೆಯಲ್ಲಿ ಕೇಂದ್ರ ಸಚಿವರು ಎಷ್ಟು ಹಣ ಕೊಡುತ್ತೇವೆ ಎಂದು ಹೇಳುತ್ತಾರೋ ನಂತರ ನಾವು ಆ ಬಗ್ಗೆ ಮತನಾಡುತ್ತೇವೆ ಎಂದರು.
ಬೆಂಗಳೂರಿನ ಅಭಿವೃದ್ಧಿ, ಸುರಂಗ ರಸ್ತೆ ಎಲ್ಲದರ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಕೇಂದ್ರ ಸಚಿವರು ನಮ್ಮ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ನಗರ ಪ್ರದೇಶಗಳ ಅಭಿವೃದ್ಧಿಗೆ ಒಂದು ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಭೆ ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಂಡ ನಂತರ ದಕ್ಷಿಣರಾಜ್ಯಗಳ ನಗರ ಅಭಿವೃದ್ಧಿಗೆ ಎಷ್ಟು ಹಣ ನೆರವು ಕೇಂದರಿಂದ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಇಂದಿನಸಭೆಯಲ್ಲಿ ರಾಜ್ಯ ಸಚಿವ ಬೈರತಿ ಸುರೇಶ್, ಬೆಂಗಳೂರಿನ ಅಭಿವೃದ್ಧಿ ಸಚಿವನಾಗಿ ನಾನು, ತಮಿಳುನಾಡು, ಕೇರಳ, ಲಕ್ಷದೀಪ್ ಮತ್ತು ಪುದುಚರಿ ರಾಜ್ಯಗಳ ನಗರಾಭಿವೃದ್ಧಿ ಸಚಿವರುಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.


























