
ಜಮಖಂಡಿ: ನಗರದ ವಸಂತ ಟಾಕೀಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದ ಗಾಯಾಳುವಿಗೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹಾಗೂ ತಹಶೀಲ್ದಾರ್ ಅನೀಲ ಬಡಗೇರ ಅವರು ತಕ್ಷಣ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯ ಮೇಲೆ ಬಿದ್ದಿದ್ದಾರೆ. ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹಾಗೂ ತಹಶೀಲ್ದಾರ್ ಅನೀಲ ಬಡಗೇರ ಅವರು ಘಟನೆ ಗಮನಿಸಿ ತಕ್ಷಣ ಗಾಯಾಳುವಿನ ನೆರವಿಗೆ ಧಾವಿಸಿದ್ದಾರೆ.
ಗಾಯಾಳುವನ್ನು ತಮ್ಮ ಸರ್ಕಾರಿ ವಾಹನದಲ್ಲಿಯೇ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಿದ್ದಾರೆ.
ಗಾಯಾಳುವನ್ನು ರೈತ ಮುಖಂಡ ಸುಭಾಸ ಭೀಮಪ್ಪ ಶಿರಬೂರ ಎಂದು ಗುರುತಿಸಲಾಗಿದೆ.
ಈ ಸಂದರ್ಭದಲ್ಲಿ ಜಮಖಂಡಿ ಗ್ರಾಮ ಲೆಕ್ಕಾಧಿಕಾರಿ ಸಾಜೀದ್ ಹೊದ್ಲಿ ಹಾಗೂ ವಾಹನ ಚಾಲಕ ಬಸವರಾಜ ಗುಗ್ಗರಿ ಉಪಸ್ಥಿತರಿದ್ದರು. ಅಪಘಾತದ ಸಂದರ್ಭದಲ್ಲಿ ಗಾಯಾಳುವಿಗೆ ತಕ್ಷಣ ನೆರವು ನೀಡಿದ ಅಧಿಕಾರಿಗಳ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.





















