ಶಿಕ್ಷಕ ವೃತ್ತಿ ಅಂತ್ಯಂತ ಶ್ರೇಷ್ಠವಾದದು:ಬೆಳಗುಂದಿ

ಸೈದಾಪುರ:ಸೆ.9:ಜ್ಞಾನವನ್ನು ಧಾರೆ ಎರೆದು ಪ್ರತಿಯೊಬ್ಬರ ಯಶಸ್ಸಿನ ಜೀವನದ ಏಳಿಗೆಗೆ ಮಹತ್ವದ ಪಾತ್ರ ವಹಿಸುವ ಶಿಕ್ಷಕ ವೃತ್ತಿ ಅಂತ್ಯಂತ ಶ್ರೇಷ್ಠವಾದದು. ಅವರನ್ನು ಗೌರವಿಸುವ ದಿನವೇ ಶಿಕ್ಷಕರ ದಿನಾವಾಗಿದೆ ಎಂದು ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಡಿ.ಎಲ್.ಇಡಿ ಕಾಲೇಜಿನಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ ಅವರು ತಮ್ಮ ಜನ್ಮ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿ ಶಿಕ್ಷಕ ಸಮೂದಾಯವನ್ನು ಗೌರವಿಸುವಂತೆ ಮಾಡಿದ್ದಾರೆ. ವೃತ್ತಿಯ ಮಹತ್ವ ಹೆಚ್ಚಾಗುವಂತೆ ಮಾಡಲು ಶಿಕ್ಷಕರು ಸಮರ್ಪಣಾ ಭಾವನೆಯೊಂದಿಗೆ ಕೆಲಸ ಮಾಡಬೇಕು. ಪ್ರತಿ ಮಗುವಿನಲ್ಲಿ ಅದರದೆಯಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಸಮಾಜದ ಉತ್ತಮ ಸಂಪನ್ಮೂಲವಾಗಿ ನಮ್ಮನ್ನು ಗುರುತಿಸಿಕೊಳ್ಳಲು ನಿರಂತರ ಅಭ್ಯಾಸ ಹಾಗೂ ಪ್ರಮಾಣಿಕ ಪ್ರಯತ್ನ ಮುಖ್ಯವಾಗಿದೆ ಎಂದು ಹೇಳಿದರು. ಇದಕ್ಕೂ ಮುಂಚೆ ಉಪನ್ಯಾಸಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಸಹಕಾರ್ಯದರ್ಶಿ ಕೆ.ಬಿ.ಗೋವರ್ಧನ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಡಿ.ಎಲ್.ಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಗಿಡಿಮಠ, ಜಿ.ಎಂ.ಗುರುಪ್ರಸಾದ, ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರೆಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ, ಹೊನ್ನಪ್ಪ ಸಗರ, ಮೀನಾಕ್ಷಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು. ಪ್ರಶಿಕ್ಷಣಾರ್ಥಿಗಳಾದ ಕಾವೇರಿ ಪ್ರಾರ್ಥಾನಾಗೀತೆ ಹಾಡಿದಳು. ರೇಖಾ ಸ್ವಾಗತಿಸಿದಳು. ವಿರೇಶ ನಿರೂಪಿಸಿದರು. ವಿಜಯಲಕ್ಷ್ಮೀ ವಂದಿಸಿದರು.