
ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨೩: ಪ್ರತಿಯೊಂದು ಮಗುವಿಗೂ ಗುಣಾತ್ಮಕ ಶಿಕ್ಷಣ ದೊರೆಯುವಂತೆ ಶಿಕ್ಷಕರು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು. ಸರ್ಕಾರದ ವಿವಿಧ ಶೈಕ್ಷಣಿಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಉತ್ತಮ ಫಲಿತಾಂಶ ಪಡೆಯಲು ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಗುಳೆದುಗುಡ್ಡ ಹೇಳಿದರು.
ನಗರದ ದರ್ಬಾರ್ ಪ್ರೌಢಶಾಲೆಯಲ್ಲಿ ನಗರ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಗರ ವಲಯದಲ್ಲಿ ಶೇ.೯೪ರಷ್ಟು ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದ್ದು, ಈ ಬಾರಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿ ಹೊಂದಬೇಕು ಎಂದರು.
ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಿ, ಪರೀಕ್ಷೆಗೆ ಪರಿಣಾಮಕಾರಿಯಾಗಿ ಸಿದ್ಧಪಡಿಸಬೇಕು. ವಿಶೇಷವಾಗಿ ಎಫ್‌ಎಲ್‌ಎನ್ (ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಹಾಗೂ ಎಲ್‌ಬಿಎ (ಕಲಿಕೆಯ ಮೂಲಭೂತ ಅಂಶಗಳು) ಕುರಿತು ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಕಲಿಕಾ ಮಟ್ಟ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಎಲ್ಲ ಮಕ್ಕಳು ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳುವುದರ ಜತೆಗೆ, ದಾಖಲಾದ ಪ್ರತಿಯೊಬ್ಬ ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು. ಧಾರವಾಡದ ಅಪರ ಆಯುಕ್ತರು ನೀಡಿರುವ ಮಾರ್ಗದರ್ಶನದಂತೆ ಶಾಲೆಗಳಲ್ಲಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು.
ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಹೊಸೂರು ಮಾತನಾಡಿ, ಮಕ್ಕಳ ಗುಣಾತ್ಮಕ ಕಲಿಕೆಗೆ ಅಪರ ಆಯುಕ್ತರು ವಿಶೇಷ ಕಾಳಜಿ ವಹಿಸಿದ್ದು, ಪ್ರತಿಯೊಂದು ಶಾಲೆಯಲ್ಲಿಯೂ ಎಫ್‌ಎಲ್‌ಎನ್ ಹಾಗೂ ಎಲ್‌ಬಿಎಗೆ ಹೆಚ್ಚಿನ ಆದ್ಯತೆ ನೀಡಬೇಕು. ನೋಡಲ್ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದು ಯಶಸ್ವಿ ಕಲಿಕೆಯತ್ತ ಗಮನ ಹರಿಸಬೇಕು ಎಂದರು.
ಮುAದಿನ ದಿನಗಳಲ್ಲಿ ನಗರ ವಲಯದ ಎಲ್ಲ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ಸಂಘಟಿತವಾಗಿ ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಕಾರ್ಯಾಗಾರದ ಬಳಿಕ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಎಫ್‌ಎಲ್‌ಎನ್, ಎಲ್‌ಬಿಎ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುರಿತು ನೋಡಲ್ ಅಧಿಕಾರಿಗಳಿಂದ ತರಬೇತಿ ನೀಡಲಾಯಿತು. ನೋಡಲ್ ಅಧಿಕಾರಿಗಳಾದ ಪ್ರಕಾಶ ನಾಲತವಾಡ, ಸುಜಾತಾ ಹಿರೇಮಠ ಹಾಗೂ ಸವಿತಾ ಗೋಡೆಕರ ತರಬೇತಿ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಡಿ. ಮಸೂತಿ, ಶಿಕ್ಷಕರ ಸಂಘದ ಅಧ್ಯಕ್ಷ ಸಯ್ಯದ್ ಜುಬೇರ್ ಕೇರೂರು, ದರ್ಬಾರ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುಜ್ಜರ್, ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ, ಪಿ.ಜಿ. ಹಿರೇಮಠ, ಎಂ.ಎA. ಗುರಾಡಿ, ಎಸ್.ಕೆ. ಬೊಮ್ಮನಳ್ಳಿ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

































