Home ಜಿಲ್ಲೆ ಸಮಾಜದ ಬೆಳವಣಿಗೆಗೆ ಶಿಕ್ಷಕರೇ ಅಡಿಪಾಯ

ಸಮಾಜದ ಬೆಳವಣಿಗೆಗೆ ಶಿಕ್ಷಕರೇ ಅಡಿಪಾಯ

ಬೀದರ್: ವಿದ್ಯಾರ್ಥಿಗಳು ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೇ ಅಡಿಪಾಯ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಪರಮೇಶ್ವರ್ ನಾಯಕ್ ಹೇಳಿದರು.
ನಗರದ ಲಾವಣ್ಯ ಪಂಕ್ಷನ್ ಹಾಲ್‍ನಲ್ಲಿ ರೋಟರಿ ಕ್ಲಬ್ ಬೀದರ್ ವತಿಯಿಂದ ಈಚೆಗೆ ಆಯೋಜಿಸಿದ್ದ ಎಂಜಿನಿಯರ್‍ಗಳ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು .
ಶಿಕ್ಷಕರು ಕೇವಲ ಪಠ್ಯ ಪುಸ್ತಕದ ಜ್ಞಾನ ನೀಡುವುದಷ್ಟೇ ಅಲ್ಲ; ವಿದ್ಯಾರ್ಥಿಗಳಲ್ಲಿ ಜಿಜ್ಞಾಸೆ, ಮಾನವೀಯತೆ, ಪ್ರಾಮಾಣಿಕತೆ, ನೈತಿಕತೆ, ಸಂಸ್ಕøತಿ, ಸಂಸ್ಕಾರದ ಜತೆಗೆ ಉತ್ತಮ ಗುಣಗಳನ್ನು ಬೆಳೆಸುತ್ತಾರೆ. ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುತ್ತಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಅಧುನಿಕ ಭಾರತದ ಪ್ರಸಿದ್ಧ ಶಿಲ್ಪಿ, ದಕ್ಷ ಆಡಳಿತಗಾರ ಮತ್ತು ಮಹಾನ್ ಎಂಜಿನಿಯರ್ ಆಗಿದ್ದರು ಎಂದು ಹೇಳಿದರು.
ವಿಶ್ವೇಶ್ವರಯ್ಯನವರು ಮೈಸೂರಿನ ಕೆ.ಎಸ್.ಆರ್ ಅಣೆಕಟ್ಟು ಕಟ್ಟಿಸಿ ಸಾವಿರಾರು ಎಕರೆ ಭೂಮಿಗೆ ನೀರಾವರಿ ಒದಗಿಸಿದರು. ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಗೆ ಕಾರಣರಾದರು. ಅವರಲ್ಲಿದ್ದ ಬದ್ಧತೆ, ಸಮಯಪ್ರಜ್ಞೆ, ದಕ್ಷತೆ ಹಾಗೂ ಪ್ರಮಾಣಿತೆಯನ್ನು ಎಲ್ಲ ಎಂಜಿನಿಯರ್ ಗಳು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್ ಪರಿಷತ್ತಿನ ಸದಸ್ಯರೂ ಆದ ರೋಟರಿ ಕಲ್ಯಾಣ ಝೋನ್ ಕಲಿಕಾ ಸಂಯೋಜಕ ಹಾವಶೆಟ್ಟಿ ಪಾಟೀಲ ಮಾತನಾಡಿ, ನಾಡಿನ ಕೆಲವೇ ಕೆಲವು ಜನಪರ ಹಾಗೂ ಜೀವಪರ ಸಂಸ್ಥೆಗಳಲ್ಲಿ ರೋಟರಿ ಸಂಸ್ಥೆ ಒಂದು. ಶತಮಾನ ಕಂಡ ರೋಟರಿ ಕ್ಲಬ್ ಬೀದರ್ ಜಿಲ್ಲೆಯಲ್ಲಿ ಐದು ದಶಕಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದು, ಪ್ರಮುಖವಾಗಿ ಆರೋಗ್ಯ ಶಿಬಿರ, ಪರಿಸರ ಸಂರಕ್ಷಣೆ, ಮಹಿಳಾ ಸಬಲಿಕರಣ, ಶಾಲೆಗಳಿಗೆ ಪುಸ್ತಕ, ಡೆಸ್ಕ್, ಕಂಪ್ಯೂಟರ್ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹತ್ತು ಹಲವು ಕಾರ್ಯ ಮಾಡುತ್ತಿದೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ಅನೀಲಕುಮಾರ ಬಿರಾದಾರ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎಂಜಿನಿಯರ್‍ಗಳ ಮತ್ತು ಶಿಕ್ಷಕರ ದಿನ ಆಚರಿಸಿ ಸುಮಾರು 20 ಆದರ್ಶ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಣ ಶಿಕ್ಷಕ ಪ್ರಶಸ್ತಿ ಮತ್ತು 25 ಎಂಜಿನಿಯರ್‍ಗಳಿಗೆ ಉತ್ತಮ ಎಂಜಿನಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಎಂಜಿನಿಯರ್ ಆಗಿರುವ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪಂಚಾಯತ್ ರಾಜ ಎಂಜಿನಿಯರಿಂಗ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಗೋರಖನಾಥ ಚನಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ ಸಾಳೆ, ಕ್ರೆಡಾಯಿ ಅಧ್ಯಕ್ಷ ರವಿ ಮೂಲಗೆ ಉಪಸ್ಥಿತರಿದ್ದರು.
ಡಾ. ಧನಲಕ್ಷ್ಮಿ ಪಾಟೀಲ ವಚನ ಪ್ರಾರ್ಥನೆ ನಡೆಸಿಕೊಟ್ಟರು. ರೋಟರಿ ಕ್ಲಬ್ ಕಾರ್ಯದರ್ಶಿ ಸಂಗಮೇಶ ಮಮಶೆಟ್ಟಿ ಸ್ವಾಗತಿಸಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು. ಕ್ಲಬ್ ಕೋಶಾಧ್ಯಕ್ಷ ಅನೀಲಕುಮಾರ ಮಸೂದಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ವೃದ್ಧರಿಗೆ ವ್ಹೀಲ್ ಚೇರ್‍ಗಳನ್ನು ವಿತರಿಸಲಾಯಿತು.