
ಕೋಲಾರ,ಮೇ,೨೩- ಮಕ್ಕಳಿಗೆ ಚಿಕ್ಕಂದಿನಿಂದಲೇ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮ ಕಲಿಸಿ ಸಂಸ್ಕಾರಯುತ ಸಮಾಜ ನಿರ್ಮಿಸುವ ಪ್ರಯತ್ನ ಮಾಡಲು ಪೋಷಕರಿಗೆ ಯೋಗ ಶಿಕ್ಷಕ ಜಯಣ್ಣ ಮನವಿ ಮಾಡಿದರು.
ನಗರದ ಶ್ರೀ ಮಹರ್ಷಿ ಯೋಗ ಮಂದಿರದಲ್ಲಿ ನಡೆದ ೪೫ ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಧಕ ಮಕ್ಕಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು.
ಯೋಗ ಮಂದಿರದಲ್ಲಿ ಕಳೆದ ೪೫ ದಿನಗಳಿಂದ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸಿ, ವಿವಿಧ ಚಟುವಟಿಕೆಗಳ ಅರಿವು ನೀಡಲಾಗಿದೆ ಎಂದ ಅವರು, ಇಲ್ಲಿ ಕಲಿತ ಯೋಗಾಭ್ಯಾಸವನ್ನು ಜೀವನವಿಡೀ ಮುಂದುವರೆಸಿ ನೀವು ಸದಾ ಆರೋಗ್ಯವಾಗಿರುತ್ತೀರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿಗೆ ಬಿದ್ದು, ದಾರಿ ತಪ್ಪುತ್ತಿದ್ದಾರೆ, ಮೊಬೈಲ್ ಸದ್ಬಳಕೆಯಾದರೆ ಒಳಿತು ಆದರೆ ದುರ್ಬಳಕೆಯಾಗುತ್ತಿರುವುದೇ ಹೆಚ್ಚಾಗಿದೆ, ಪೋಷಕರು ಪುಟ್ಟ ಮಕ್ಕಳಿಗೆ ಮೊಬೈಲ್ ನೀಡಿ ಅವರು ಅದರ ದಾಸರಾಗುವಂತೆ ಮಾಡುತ್ತಿದ್ದು, ಊಟ ಮಾಡಲು, ತಿಂಡಿ ತಿನ್ನಲು, ನೀರು ಕುಡಿಯಲು ಇಂದು ಮೊಬೈಲ್ ಬೇಕಾಗಿದೆ ಎಂದು ವಿಷಾದಿಸಿದರು.
ಮಕ್ಕಳಲ್ಲಿ ಚಿಕ್ಕಂದಿನಲ್ಲೇ ಯೋಗಭ್ಯಾಸ ಧ್ಯಾನ ಪ್ರಾಣಾಯಾಮ ಮಾಡುವುದರಿಂದ ಒಳ್ಳೆಯ ನಡುವಳಿಕೆ ಮೂಡುತ್ತದೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ದೇಶ ಪ್ರೇಮ ಬೆಳೆಯುತ್ತದೆ ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳು ಯೋಗ ಬಂಧುಗಳು ಕಾರ್ಯದರ್ಶಿ ಪ್ರಬಂಧಕರು ಹಾಜರಿದ್ದು, ಶಿಬಿರದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.