
ಬೀದರ್:ಫೆ.1: ಪಾಲಕರು ಮಕ್ಕಳಿಗೆ ಇಷ್ಟಲಿಂಗ ಪೂಜೆ, ವಚನ ಅಧ್ಯಯನ ಸೇರಿದಂತೆ ಶರಣ ಸಂಸ್ಕøತಿ ಕಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಬಸವಗಿರಿಯಲ್ಲಿ ವಚನ ವಿಜಯೋತ್ಸವದ ಎರಡನೇ ದಿನವಾದ ಶನಿವಾರ ನಡೆದ ಯುವ ಶಕ್ತಿ ಸಮಾವೇಶದಲ್ಲಿ ವಿಶ್ವ ಕಲ್ಯಾಣ ಯುವ ಪರಿಷತ್ ನಾಮಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಶರಣ ಸಂಸ್ಕøತಿಯ ಪಾಲನೆಯಿಂದ ಮಾತ್ರ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಸಾಧ್ಯವಿದೆ ಎಂದು ತಿಳಿಸಿದರು.
ಪ್ರಸ್ತುತ ಯುವ ಪೀಳಿಗೆ ಶರಣ ಸಂಸ್ಕøತಿಯಿಂದ ವಿಮುಖವಾಗಿ, ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರು ಹೋಗುತ್ತಿರುವುದು ಕಳವಳಕಾರಿ ಎಂದು ಹೇಳಿದರು.
12ನೇ ಶತಮಾನದಲ್ಲಿ ನಡೆದಿದ್ದ ಕಲ್ಯಾಣ ಕ್ರಾಂತಿ ಸಾಮಾನ್ಯವಾದುದ್ದಲ್ಲ. ಅದು, ವೈಚಾರಿಕ ಹಾಗೂ ಸಾರ್ವಕಾಲಿಕ ಮಹತ್ವದ ಕ್ರಾಂತಿ ಎಂದು ಬಣ್ಣಿಸಿದರು.
ಅಂದು ವಿಶ್ವದ ವಿವಿಧೆಡೆಯಿಂದ ಶರಣರು ಕಲ್ಯಾಣಕ್ಕೆ ಬಂದಿದ್ದರು. ವಚನ ಸಾಹಿತ್ಯ ರಚಿಸಿದ್ದರು. ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು.
ಬಸವಾದಿ ಶರಣರ ವಚನಗಳಲ್ಲಿ ಜಗತ್ತಿನ ಸರ್ವ ಸಮಸ್ಯೆಗಳಿಗೂ ಪರಿಹಾರ ಇದೆ. ಬಸವ ತತ್ವ ಪ್ರಚಾರದಲ್ಲಿ ತೊಡಗಿಸಿರುವ ಡಾ. ಗಂಗಾಂಬಿಕೆ ಅಕ್ಕ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇಸ್ರೋ ಉಪ ನಿರ್ದೇಶಕಿ ಕೆ.ಎಲ್. ಶಿವಾನಿ ಶರಣ ವಿಜ್ಞಾನಿ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಮಹಿಳೆಯರು ಕೀಳರಿಮೆ ತೊರೆದು ಹೊರ ಬರಬೇಕು. ಸ್ವಂತ ವಿಕಾಸಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು, ನಿಷ್ಠೆ, ಶ್ರದ್ಧೆಯಿಂದ ಪರಿಶ್ರಮ ವಹಿಸಿದರೆ ಅಸಾಧ್ಯವಾದುದ್ದನ್ನು ಸಾಧಿಸಬಹುದು. ಪದವೀಧರರಿಗೆ ಇಸ್ರೋದಲ್ಲಿ ವಿಪುಲ ಅವಕಾಶಗಳು ಇವೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಂಬಿಕೆ ಅಕ್ಕ ಮಾತನಾಡಿ, ಯುವ ಶಕ್ತಿ ದೇಶದ ದೊಡ್ಡ ಶಕ್ತಿಯಾಗಿದೆ. ಸದೃಢ ರಾಷ್ಟ್ರ ಕಟ್ಟಲು ಬಳಕೆಯಾಗಬೇಕಿದೆ. ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿಯೇ ವಿಶ್ವ ಕಲ್ಯಾಣ ಯುವ ಪರಿಷತ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಯುವಕರು ಜೀವನದಲ್ಲಿ ಶಿಸ್ತು, ಸಮಯ ಪ್ರಜ್ಞೆ, ದೃಢ ನಂಬಿಕೆ, ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಬೇಕು. ಆದರ್ಶ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಯುವಕರು ನಡೆ-ನುಡಿ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ ಸಿ.ವಿ. ರಾಮನ್ ಪ್ರಶಸ್ತಿ ಪುರಸ್ಕøತ ಡಾ.ಎಂ.ಎಸ್. ಜೋಗದ್ ಮಾತನಾಡಿ, ಯುವಕರು ಧೈರ್ಯವಂತರಾಗಬೇಕು. ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವವರೆಗೆ ವಿರಮಿಸಬಾರದು ಎಂದು ಸಲಹೆ ಮಾಡಿದರು.
ಸೆಜಲಾ ಬಸವಕುಮಾರ ಸುಲಗುಂಟೆ ಗುರುಪೂಜೆ ನೇರವೇರಿಸಿದರು.
ಅನುಭಾವಿ ಶಂಕರ ದೇವನೂರು, ಮುಖಂಡರಾದ ಬಸವರಾಜ ಭತಮುರ್ಗೆ, ಶಿವರಾಜ ನರಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿರ್ ರಾಮಲಿಂಗ ಬಿರಾದಾರ, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವನಾಥ ಪಾಟೀಲ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್, ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಡಾ. ರಂಜನಾ ಪಾಟೀಲ, ಸಂಗೀತಾ ಮಿರ್ಚೆ, ವಿವೇಕ ಧನ್ನೂರು, ಶೇಖರ ಬಿರಾದಾರ, ಸತೀಶ ಪಾಟೀಲ, ಡಾ. ವಿಜಯಕುಮಾರ ಕೋಟೆ, ರಾಜಕುಮಾರ ಟಿಳ್ಳೆಕರ್, ಚಂದ್ರಕಾಂತ ಪಾಟೀಲ, ಸಂಗಮೇಶ ಕಾವಡಿ, ಯೋಗೇಶ ಸಿರಿಗೆರೆ, ಸಚಿನ ಕೊಳ್ಳೂರು, ನಿಖಿಲ್ ಖಂಡ್ರೆ, ಬಸವರಾಜ ಬಿರಾದಾರ, ಅಶೋಕ ಹೆಬ್ಬಾಳೆ, ಅರ್ಚನಾ ಮದಕಟ್ಟಿ, ವೀರೇಶ ತೂಗಾಂವೆ, ವಿಶಾಲ ಗಂದಗೆ, ಶಿವಪ್ರಸಾದ ಬಿರಾದಾರ, ರವಿಕಾಂತ ಪಾಟೀಲ ಮತ್ತಿತರರು ಇದ್ದರು.
ಆಕಾಶ ಮೊಳಕೇರಿ ವಚನ ಗಾಯನ ಮಾಡಿದರು. ವೈಷ್ಣವಿ ಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು. ರೋಹಿತ ಜಿರೋಬೆ ವಂದಿಸಿದರು.
























