
ವಿಜಯಪುರ, ಆ. 5: ವಿಜಯಪುರದ ಪ್ರತಿಭಾವಂತ ಯುವ ಕ್ರಿಕೆಟಿಗರಾದ ತನೂಶ್ರೀ ಇಜೇರಿ ಅವರು 2026-27ನೇ ಸಾಲಿನ ಕೆಎಸ್‍ಸಿಎ ಅಂಡರ್-19 ಮಹಿಳಾ ಇಂಟರ್ ಝೋನಲ್ ಟಿ-20 ಪಂದ್ಯಾವಳಿಯ ಕಂಬೈನ್ಡ್ ಮೊಫಸ್ಸಿಲ್ ಘಿI ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯು ಆಗಸ್ಟ್ 6ರಿಂದ 12ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೆಎಸ್‍ಸಿಎ ಮಹಿಳಾ ಇಂಟರ್ ಮೊಫಸ್ಸಿಲ್ ಪಂದ್ಯಾವಳಿಯಲ್ಲಿ ರಾಯಚೂರು ವಲಯ ಮಹಿಳಾ ತಂಡವನ್ನು ಪ್ರತಿನಿಧಿಸಿದ ತನೂಶ್ರೀ ಅವರು ಆಲ್‍ರೌಂಡ್ ಪ್ರದರ್ಶನ ನೀಡಿ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.
ಎಡಗೈ ಆರಂಭಿಕ ಬ್ಯಾಟರ್ ಹಾಗೂ ಎಡಗೈ ಆರ್ಥಡಾಕ್ಸ್ ಸ್ಪಿನ್ನರ್ ಆಗಿರುವ ಅವರು ಐದು ಪಂದ್ಯಗಳಲ್ಲಿ 172 ರನ್ ಗಳಿಸಿದ್ದು, ಧಾರವಾಡ ವಲಯದ ವಿರುದ್ಧ ಅಜೇಯ 56 ರನ್ ಹಾಗೂ ಶಿವಮೊಗ್ಗ ವಲಯದ ವಿರುದ್ಧ 57 ರನ್ ಸಿಡಿಸಿ ಮಿಂಚಿದ್ದಾರೆ. ಬೌಲಿಂಗ್‍ನಲ್ಲಿಯೂ 5 ವಿಕೆಟ್ ಪಡೆದು ತಂಡದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸ್ಥಿರ ಪ್ರದರ್ಶನ ನೀಡಿದ ಪರಿಣಾಮ ತನೂಶ್ರೀ ಅವರಿಗೆ ಪ್ರತಿಷ್ಠಿತ ಕಂಬೈನ್ಡ್ ಮೊಫಸ್ಸಿಲ್ ಘಿI ತಂಡದಲ್ಲಿ ಸ್ಥಾನ ದೊರೆತಿದೆ.
ಈ ಸಾಧನೆಗೆ ರಾಯಚೂರು ವಲಯ ಮಹಿಳಾ ಕ್ರಿಕೆಟ್ ತಂಡದ ಆಡಳಿತ ಮಂಡಳಿ, ಬಿಜಾಪುರ ಮಹಿಳಾ ಕ್ರಿಕೆಟ್ ಕ್ಲಬ್, ತರಬೇತುದಾರರು ಹಾಗೂ ಆಟಗಾರರು ಅಭಿನಂದನೆ ಸಲ್ಲಿಸಿದ್ದು, ಮುಂಬರುವ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜಯಪುರ ಹಾಗೂ ಕರ್ನಾಟಕಕ್ಕೆ ಕೀರ್ತಿ ತರಲೆಂದು ಶುಭ ಹಾರೈಸಿದ್ದಾರೆ.































