
ಲಕ್ಷ್ಮೇಶ್ವರ,ಡಿ9: ಲಕ್ಷ್ಮೇಶ್ವರ ಐದು ಬಣಗಳನ್ನು ಸೇರಿಸಿ 43 ಹಳ್ಳಿಗಳೊಂದಿಗೆ ಹೊಸ ತಾಲೂಕು ರಚನೆಯಾಗಿ ಇದೇ ಡಿಸೆಂಬರ್ 24ಕ್ಕೆ ಎಂಟು ವರ್ಷಗಳು ಪೂರ್ಣಗೊಳ್ಳಲಿದೆ.
ಎಂಟು ವರ್ಷ ಕಳೆದರೂ ಎಂಟು ಕಚೇರಿಯು ಆರಂಭವಾಗದೆ ಸರ್ಕಾರ ಹೊಸ ತಾಲೂಕುಗಳಿಗೆ ಹೊಸ ಆಯಾಮ ನೀಡಲು ಇದುವರೆಗೂ ಸಾಧ್ಯವಾಗದೆ ಜನಸಾಮಾನ್ಯರು ರೈತರು ವಿದ್ಯಾರ್ಥಿಗಳು ಗೋಳನ್ನು ಅನುಭವಿಸುವುದು ಮಾತ್ರ ತಪ್ಪಿಲ್ಲ.
ಹೊಸ ತಾಲೂಕು ರಚನೆಯಾದ ನಂತರ ತಾಲೂಕ ಪಂಚಾಯಿತಿ ಒಂದನ್ನು ಹೊರತುಪಡಿಸಿದರೆ ಯಾವ ಇಲಾಖೆಗಳ ಕಚೇರಿಗಳು ಇಲ್ಲಿ ಆರಂಭವಾಗಿಲ್ಲ. ಪ್ರಮುಖವಾಗಿ ರೈತರಿಗೆ ಕೃಷಿ ಇಲಾಖೆ ತೋಟಗಾರಿಕಾ ಇಲಾಖೆ ರೇಷ್ಮೆ ಇಲಾಖೆ ಸೇರಿದಂತೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಬಕಾರಿ ಇಲಾಖೆ ಲೋಕೋಪಯೋಗಿ ಇಲಾಖೆ ಅಂಕಿ ಸಂಖ್ಯೆ ಇಲಾಖೆ ಸಹಕಾರ ಸಂಘಗಳ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಯಾವ ಕಚೇರಿಗಳು ಆರಂಭವಾಗಿಲ್ಲ.
ಈಗ ಸರ್ಕಾರದಿಂದ ಪ್ರಜಾಸೌಧ ನಿರ್ಮಿಸಲು ಆರು ಕೋಟಿ ಹಣ ಬಿಡುಗಡೆಯಾಗಿದ್ದರು ಇದುವರೆಗೂ ಪ್ರಜಾಸೌಧ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಯಾವ ಪ್ರಕ್ರಿಯೆಗಳು ಪೂರ್ಣಗೊಳ್ಳದೆ ಕಂದಾಯ ಇಲಾಖೆಯ ತಹಶೀಲ್ದಾರ್ ಕಾರ್ಯಾಲಯ ನ್ಯಾಯಾಲಯದ ಕಟ್ಟಡದಲ್ಲಿ ಕಿಷ್ಕಿಂದೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಇನ್ನೂ ನಾಡಕಚೇರಿ ಪಾಳು ಬಿದ್ದ ಹಳೆಯ ನ್ಯಾಯಾಲಯದ ಕಟ್ಟಡದಲ್ಲಿ ನಡೆಯುತ್ತಿದ್ದು ಖಜಾನೆ ಇಲಾಖೆಯ ಉಪಖಜನೆ ಕಾರ್ಯಾಲಯವು ಸಹ ಇದೇ ಕಟ್ಟಡದಲ್ಲಿ ನಡೆಯುತ್ತಿದೆ.
ತಾಲೂಕ ಪಂಚಾಯಿತಿ ಕಾರ್ಯಾಲಯವು ಸಹ ಕೆಎಸ್‍ಆರ್ಟಿಸಿ ಕಲ್ಯಾಣ ಮಂಟಪದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2017ರಲ್ಲಿ ಲಕ್ಷ್ಮೇಶ್ವರಕ್ಕೆ ಬಂದಾಗ ಅಧಿಕೃತ ಘೋಷಣೆ ಮಾಡಿದ್ದರು ನಂತರ ಬಂದ ಬಿಜೆಪಿ ಸರ್ಕಾರ ಇದೀಗ ಪುನಃ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಬಂದರು ಹೊಸ ತಾಲೂಕಿಗೆ ಹೊಸ ಆಯಾಮ ಬಂದಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನವಾಗಿದೆ.
ತಾಲೂಕ ಪಂಚಾಯತಿ ಅನುದಾನವನ್ನು ಹೊರತುಪಡಿಸಿದರೆ ಎಲ್ಲವೂ ಅಖಂಡ ಶಿರಟ್ಟಿಯ ಆಧಾರದಲ್ಲಿ ಬಿಡುಗಡೆಯಾಗುತ್ತಿದ್ದು ಹೀಗಾಗಿ ಲಕ್ಷ್ಮೇಶ್ವರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ತಾಲೂಕಿನಲ್ಲಿ ಯಾವ ರಸ್ತೆಗಳು ಸರಿಯಾಗಿಲ್ಲ ಎಲ್ಲವೂ ಹಾಳು ಕೊಂಪೆಯಾಗಿದ್ದು ಸರ್ಕಾರದ ದಿವ್ಯ ನಿರ್ಲಕ್ಷ ಎದ್ದು ಕಾಣುತ್ತಿದೆ.
ಹೊಸ ತಾಲೂಕಿಗೆ ಹೊಸ ಕಚೇರಿಗಳು ಆರಂಭವಾದರೆ ಜನಸಾಮಾನ್ಯರು ಪದೇ ಪದೇ ಶಿರಹಟ್ಟಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ ಆದರೆ ಈ ನಿಟ್ಟಿನಲ್ಲಿ ಸರ್ಕಾರ ಪಂಚ ಗ್ಯಾರೆಂಟಿ ನೀಡಿದ್ದು ಆರನೇ ಗ್ಯಾರಂಟಿಯಾಗಿ ಹೊಸ ತಾಲೂಕುಗಳಿಗೆ ಹೊಸ ಇಲಾಖೆಗಳನ್ನು ನೀಡುವರೆ ಎಂಬುದನ್ನು ಬೆಳಗಾವಿಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಉತ್ತರ ಕರ್ನಾಟಕದ ಎಲ್ಲ ಶಾಸಕರು ಪಕ್ಷಭೇದ ಮರೆತು ಹೊಸ ತಾಲೂಕುಗಳಿಗೆ ಎಲ್ಲಾ ಕಚೇರಿಗಳನ್ನು ತರುವ ನಿಟ್ಟಿನಲ್ಲಿ ಒತ್ತಡ ಹೇರಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

























