
ಬೀದರ್: ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಾಂಸ್ಕೃತಿಕ ಭವನಕ್ಕಾಗಿ ತಾಲ್ಲೂಕು ಆಡಳಿತವು ತಾಲ್ಲೂಕಿನ ಅತಿವಾಳದಲ್ಲಿ ಜಮೀನು ಕಾಯ್ದಿರಿಸಿದೆ.
ಒಟ್ಟು ೯ ಎಕರೆ ೩೬ ಗುಂಟೆ ಜಮೀನು ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ ಎಂದು ಬೀದರ್ ತಹಶೀಲ್ದಾರ್ ರವೀಂದ್ರ ದಾಮಾ ತಿಳಿಸಿದ್ದಾರೆ.
ಅತಿವಾಳದಲ್ಲಿ ಜಿಲ್ಲಾಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ, ಸಾಂಸ್ಕೃತಿಕ ಭವನ, ಬುದ್ಧ ವಿಹಾರ ಹಾಗೂ ಉದ್ಯಾನಕ್ಕೆ ೧೦ ಎಕರೆ ಜಮೀನು ಮಂಜೂರು ಮಾಡುವಂತೆ ದಿ ಬುದ್ಧ ಯುತ್ ಕ್ಲಬ್ ವತಿಯಿಂದ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಇದೀಗ ಅವರು ಗ್ರಾಮದ ಸರ್ವೇ ಸಂಖ್ಯೆ ೧ ರಲ್ಲಿ ೯ ಎಕರೆ ೩೬ ಗುಂಟೆ ಜಮೀನು ಕಾಯ್ದಿರಿಸಿ ಆದೇಶ ಹೊರಡಿಸಿದ್ದಾರೆ ಎಂದು ದಿ ಬುದ್ಧ ಯುತ್ ಕ್ಲಬ್ ಅಧ್ಯಕ್ಷ ಮಹೇಶ ಎಸ್. ರಾಂಪುರೆ ತಿಳಿಸಿದ್ದಾರೆ.
ಸರ್ಕಾರ ಆದಷ್ಟು ಬೇಗ ಅಧ್ಯಯನ ಹಾಗೂ ಸಾಂಸ್ಕೃತಿಕ ಕೇಂದ್ರ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.




















