ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ

ಹುಳಿಯಾರು, ನ. ೨೯- ಮಕ್ಕಳಲ್ಲಿ ಪಠ್ಯದ ಜತೆಗೆ ಪಠ್ಯೇತರ ವಿಷಯಗಳ ಸುಪ್ತ ಪ್ರತಿಭೆಗಳನ್ನು ಹೊರ ಹಾಕುವುದು ಪ್ರತಿಭಾ ಕಾರಂಜಿ ಉದ್ದೇಶವಾಗಿದೆ. ನಿರ್ಣಾಯಕರು ತಾರತಮ್ಯ ಮಾಡದೆ ಎಚ್ಚರಿಕೆಯಿಂದ ಉತ್ತಮ ಪ್ರತಿಭೆಯನ್ನು ಆಯ್ಕೆ ಮಾಡಬೇಕು ಎಂದು ಗ್ರಾ.ಪಂ. ಸದಸ್ಯ ರಘುವೀರ್ ಹೇಳಿದರು.


ಹುಳಿಯಾರು ಹೋಬಳಿಯ ಬೋರನಕಣಿವೆ ವಿದ್ಯಾಸಿರಿ ನಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಮಕ್ಕಳು ಸೋಲು- ಗೆಲುವು ಬಗ್ಗೆ ಯೋಚಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಮಕ್ಕಳು ತಮ್ಮಲ್ಲಿನ ಕೀಳರಿಮೆಯಿಂದ ಪ್ರತಿಭೆಯನ್ನು ಹೊರ ಹಾಕಲಾಗದೇ ಎಲೆಮರೆಯ ಕಾಯಿಯಂತೆ ಉಳಿದು ಬಿಡುತ್ತಾರೆ. ಹೀಗಾಗಿ ಪ್ರತಿಭೆಗಳನ್ನು ಹುಡುಕುವುದು ಶಿಕ್ಷಕರ ಕರ್ತವ್ಯ ಎಂದರು.


ಪತ್ರಕರ್ತ ರಂಗನಕೆರೆ ಮಹೇಶ್ ಮಾತನಾಡಿ, ಸರ್ಕಾರ ಪಠ್ಯದ ಜತೆಗೆ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ ಕಾರ್ಯಕ್ರಮಗಳನ್ನು ಮಾಡುತ್ತದೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಹೊಸತನ ತರುತ್ತದೆ. ಇದರಿಂದ ಕಲಿಕೆ ಶಾಶ್ವತ ಬಲಗೊಳ್ಳುತ್ತದೆ ಎಂದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಣ್ಣ ಮಾತನಾಡಿ, ಶಿಕ್ಷಣ ಎಲ್ಲ ಸಮಸ್ಯೆಗಳಿಗೆ ಸಂಜೀವಿನಿ. ಪಂಡಿತಂ ಸರ್ವತ್ರ ಪೂಜ್ಯತೆ ಆದ್ದರಿಂದ ನೀವೆಲ್ಲರೂ ಜ್ಞಾನವಂತರಾಗಿ. ಮಕ್ಕಳು ಸದಾ ಹೊಸದನ್ನು ಕಲಿಯುವ ಗುಣ ಬೆಳಸಿಕೊಳ್ಳಬೇಕು ಎಂದರು.


ನಂತರ ಮಕ್ಕಳಿಂದ ವಿವಿಧ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ವಿಜೇತರಾದ ಎಲ್ಲ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಾಧಮ್ಮ ವಹಿಸಿದ್ದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸದಸ್ಯರಾದ ಸುಧಾಕರ್, ಈರಣ್ಣ, ಶಿವಣ್ಣ, ಮಂಜುನಾಥ್, ವಿದ್ಯಾಸಿರಿ ಶಾಲೆಯ ಕಾರ್ಯದರ್ಶಿ ಕುಮಾರ್,ಮುಖ್ಯ ಶಿಕ್ಷಕಿ ಆಶಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ನಟರಾಜ ಅರಸ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.