ನಿಮ್ಮ ಹೃದಯದ ಆರೈಕೆ ನಮ್ಮ ಧ್ಯೇಯ

ಚಿಕ್ಕಬಳ್ಳಾಪುರ ಮೇ ೩೧– ಗುಪ್ತ ಶುಲ್ಕಗಳಿಲ್ಲ, ಆರೈಕೆಯಲ್ಲಿ ರಾಜಿ ಇಲ್ಲ ಎಂಬ ಅಡಿಬರಹದಲ್ಲಿ ಮನುಕುಲವನ್ನು ತಲುಪುತ್ತಿರುವ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರ ಆರೋಗ್ಯ ಸೇವೆಯು ಎಲ್ಲವನ್ನು ಉಚಿತವಾಗಿ ನೀಡಿ ವಿಶಿಷ್ಟ ಜೀವ ರಕ್ಷಕ ಸಂಸ್ಥೆಯಾಗಿ ಮೂಡಿ ಬರುತ್ತಿರುವುದು ಹೆಮ್ಮೆಪಡುವ ವಿಚಾರವಾಗಿದೆ. ಈ ವೈದ್ಯಾಲಯವು ಹೃದಯ ಶಸ್ತ್ರಚಿಕಿತ್ಸೆ, ಸಮಾಲೋಚನೆ, ರೋಗನಿರ್ಣಯ ಮತ್ತು ಆಸ್ಪತ್ರೆ ವಾಸ್ತವ್ಯ ಸೇರಿದಂತೆ ಸಂಪೂರ್ಣವಾಗಿ ಉಚಿತ ಹೃದಯ ಆರೈಕೆಯನ್ನು ಶುಲ್ಕ ರಹಿತವಾಗಿ ನೀಡುತ್ತಿದೆ.


ಆಸ್ಪತ್ರೆಯಲ್ಲಿ ಎಲ್ಲಾ ಶಸ್ತ್ರಚಿಕಿತ್ಸೆಗಳು, ಔಷಧೋಪಚಾರ ಸಂಪೂರ್ಣ ಉಚಿತ ವಾಗಿರುತ್ತವೆ. ಅವುಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆಗಳು: ತೆರೆದ ಹೃದಯ ಶಸ್ತ್ರಚಿಕಿತ್ಸೆ, ಹೃದಯ ಕವಾಟ ಬದಲಿ, ಜನ್ಮಜಾತ ಹೃದ್ರೋಗ ಶಸ್ತ್ರಚಿಕಿತ್ಸೆಗಳು ಪ್ರಮುಖವಾಗಿವೆ.


ವಿಶೇಷ ಸೇವೆಗಳು: ಸುಧಾರಿತ ಹೃದಯ-ಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸೆಗಳು ಈ ಶಸ್ತ್ರಚಿಕಿತ್ಸೆಯ ಭಾಗವಾಗಿ ಆಸ್ಪತ್ರೆಯಲ್ಲಿ ಲಭಿಸುತ್ತವೆ. ಅನುಭವಿ ಹೃದ್ರೋಗ ತಜ್ಞರು ಮತ್ತು ಹೃದಯ ಶಸ್ತ್ರಚಿಕಿತ್ಸಕರೊಂದಿಗೆ ಸಮಾಲೋಚನೆಗಳು ದೊರೆಯುತ್ತಿವೆ.ರೋಗನಿರ್ಣಯ ಪರೀಕ್ಷೆಗಳು ಇ ಸಿ ಜಿ, ಎಕೋ, ಆಂಜಿಯೋಗ್ರಫಿ ಮೊದಲಾದ ಚಿಕಿತ್ಸೆಗಳನ್ನು ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲರಿಗೂ ಒದಗುವಂತೆ ಮಾಡಲಾಗಿದೆ.


ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಔಷಧೋಪಚಾರ, ಜೊತೆಯಲ್ಲಿ ಬರುವ ಒಬ್ಬರಿಗೆ ವಾಸ್ತವ್ಯದ ವ್ಯವಸ್ಥೆ ಮತ್ತು ಚಿಕಿತ್ಸೆ ಯ ಸಮಯದಲ್ಲಿನ ಆಹಾರ ಸಹಿತ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ.ಆಸ್ಪತ್ರೆಯಲ್ಲಿ ವಿಶ್ವ ದರ್ಜೆಯ ವೈದ್ಯರು ಲಭ್ಯರಿದ್ದು ಎಲ್ಲರಿಗೂ ಮನೆಯ ಸದಸ್ಯರಂತೆ ಸಹಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.


ಇದುವರೆಗೆ ನಮ್ಮಲ್ಲಿ ಉನ್ನತ ಮಟ್ಟದ ತರಬೇತಿಯನ್ನು ಪಡೆದ ಹೃದಯ ತಜ್ಞರು ಮತ್ತು ಶಸ್ತ್ರಚಿಕಿತ್ಸಕರ ತಂಡವು ಸಾವಿರಾರು ರೋಗಿಗಳಿಗೆ ಸಹಾನುಭೂತಿಯಿಂದ ಯಶಸ್ಸಿ ಚಿಕಿತ್ಸೆ ನೀಡಿದೆ. ಹುಟ್ಟುವಾಗಲೇ ಹೃದಯ ದೋಷದಿಂದ ಜನಿಸಿದ ಮಗುವಾಗಲಿ ಅಥವಾ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವ ವಯಸ್ಸಾದ ರೋಗಿಯಾಗಲಿ ಯಾವುದೇ ವ್ಯತ್ಯಾಸವಿಲ್ಲದೆ ಸಹಾನು ಭೂತಿಯಿಂದ ಉಪಚರಿಸುತ್ತದೆ. ಇಲ್ಲಿನ ವೈದ್ಯರು ಪ್ರತಿ ಹೃದಯದ ಬಡಿತವನ್ನು ಸರಾಗಗೊಳಿಸಲು ಸದಾ ಸಜ್ಜಾಗಿ ಬರುವ ರೋಗಿಗಳನ್ನು ಅತಿಥಿಗಳಂತೆ ಆದರಿಸಿ ಕಾಯಿಲೆಗಳಿಗೆ ಉಪಶಮನ ನೀಡುವ ಬದ್ಧತೆಯ ಧ್ಯೇಯದೊಂದಿಗೆ ನಿರಂತರವಾಗಿ ಉಪಸ್ಥಿತರಿರುತ್ತಾರೆ.


ಯಾವುದೇ ಗುಪ್ತ ಶುಲ್ಕಗಳಿಲ್ಲದ ಪೂರ್ಣ ಪಾರದರ್ಶಕತೆಯ ವ್ಯವಹಾರವು ಈ ವೈದ್ಯ ಸಂಸ್ಥೆಯ ವಿಶಿಷ್ಟ ಲಕ್ಷಣವಾಗಿದೆ. ರೋಗಿಗಳು ಹೆಚ್ಚಾಗಿ ಎದುರಿಸುವ ದುಬಾರಿ ವೆಚ್ಚದ ಭಯವನ್ನು ವೈದ್ಯ ಸಂಸ್ಥೆಯು ಅರ್ಥಮಾಡಿಕೊಂಡಿದ್ದು ಆಸ್ಪತ್ರೆಯಲ್ಲಿ ಪ್ರವೇಶದಿಂದ ಪ್ರಾರಂಭವಾಗಿ ಡಿಸ್ಚಾರ್ಜ್‌ವರೆಗೆ, “ನಮ್ಮ ಹೃದಯ ಆರೈಕೆ” ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತದೆ.
ನಂದಿ ಬೆಟ್ಟದ ತಪ್ಪಲಿನಲ್ಲಿರುವ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೆಲೆಗೊಂಡಿರುವ ಈ ಆಸ್ಪತ್ರೆಗೆ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದಾಗಿದೆ.ದಿನಗಟ್ಟಲೆ ಪ್ರವೇಶಾದಿ ನೋಂದಣಿಗೆ ಸರದಿಯಲ್ಲಿ ಕಾಯುವ ತೊಂದರೆಯನ್ನು ತಪ್ಪಿಸುವ ಸಲುವಾಗಿ ದೂರವಾಣಿ ಮೂಲಕ ಆರೋಗ್ಯ ಸೇವೆಯ ಅಗತ್ಯ ಉಳ್ಳವರು ನೋಂದಣಿಯನ್ನು ಪಡೆಯುವ ವ್ಯವಸ್ಥೆಯೂ ಕೂಡ ಲಭ್ಯವಿರುತ್ತದೆ.


ಯಾರಾದರೂ ಹೃದ್ರೋಗದಿಂದ ಬಳಲುತ್ತಿದ್ದರೆ, ಕಾಯಬೇಕಾದ ಪ್ರಮೇಯವು ಇಲ್ಲಿ ಉದ್ಭವಿಸುವುದಿಲ್ಲ. ಉಚಿತ ಸಮಾಲೋಚನೆ ಹಾಗೂ ಭೇಟಿಯ ವ್ಯವಸ್ಥೆಗೆ ೦೮೧೫೬೨ ೭೫೮೦೧ ಮತ್ತು ೭೬೭೬೧ ೮೧೯೭೧ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿದರೆ ಅಗತ್ಯ ಸೇವೆಯನ್ನು ನೀಡಲಾಗುವುದೆಂದು ಆಸ್ಪತ್ರೆಯ ಪ್ರಕಟಣೆಯು ತಿಳಿಸಿದೆ.


ಕಾಯಿಲೆಯಿಂದ ಬಳಲುತ್ತಿರುವವರು ಹಿಂದಿನ ವರದಿಗಳು ಮತ್ತು ರೋಗನಿರ್ಣಯದ ದಾಖಲೆಯನ್ನು ಹೊಂದಿದ್ದರೆ, ಆಸ್ಪತ್ರೆಗೆ ಭೇಟಿ ನೀಡುವಾಗ ತಮ್ಮೊಂದಿಗೆ ತರಲು ವಿನಂತಿಸಿದೆ. ರೋಗಿಗಳು ಆರೋಗ್ಯ ವಿಮೆಯನ್ನು ಹೊಂದಿದ್ದರೆ ವಿಮಾ ಚೀಟಿಯನ್ನು ತರಬಹುದಾಗಿದೆ. ವೆಚ್ಚದ ಕಾರಣದಿಂದಾಗಿ ಯಾರಿಗೂ ಚಿಕಿತ್ಸೆಯನ್ನು ನಿರಾಕರಿಸಬಾರದು ಎಂಬುದು ಸಂಸ್ಥೆಯ ಕಡಾ ಖಂಡಿತವಾದ ನಿಲುವಾಗಿರುತ್ತದೆ. ಈ ಕಾರಣಕ್ಕಾಗಿಯೇ ವಿಶ್ವ ದರ್ಜೆಯ ಹೃದಯ ಆರೈಕೆಯನ್ನೂ ಅಪಾರ ಖರ್ಚು ವೆಚ್ಚವನ್ನು ಪರಿಗಣಿಸದೆ ಅಮೂಲ್ಯವಾದ ಜೀವವನ್ನು ಉಳಿಸುವ ಸಲುವಾಗಿ ಉಚಿತವಾಗಿ ನೀಡುವ ಬದ್ಧತೆಯನ್ನು ಹೊಂದಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಉಚಿತ ಹೃದಯ ಶಸ್ತ್ರ ಚಿಕಿತ್ಸೆಯ ವಿಶೇಷ ಶಿಬಿರವನ್ನು ಆಯೋಜಿಸಲಾಗಿದ್ದು ಅಗತ್ಯ ಉಳ್ಳವರು ಅದರ ಪ್ರಯೋಜನವನ್ನು ಪಡೆಯಲು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.