
ಬೀದರ್: ಬೀದರ-ಕಲಬುರಗಿ ನಡುವೆ ಸಂಚರಿಸುವ ಡೆಮು ರೈಲು ನಿಗದಿತ ವೇಳಾಪಟ್ಟಿಯಂತೆ ಸಂಚರಿಸದೇ ನಿರಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಸಮಯ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡಾ. ಬಿ.ಆರ್. ಅಂಬೇಡ್ಕರ್ ಯುತ್ ಬ್ರಿಗೇಡ್ (ರಿ) ಲೋಕಸಭಾ ಸದಸ್ಯ ಸಾಗರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿತು.
ಸಂಸ್ಥೆಯ ಜಿಲ್ಲಾಧ್ಯಕ್ಷ ಉದಯ ನಾಯಕ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಅವರು,, ವಾರದಲ್ಲಿ ಆರು ದಿನ ಹಾಗೂ ದಿನಕ್ಕೆ ನಾಲ್ಕು ಬಾರಿ ಬೀದರದಿಂದ ಕಲಬುರಗಿಗೆ ಮತ್ತು ನಾಲ್ಕು ಬಾರಿ ಕಲಬುರಗಿಯಿಂದ ಬೀದರಕ್ಕೆ ಸಂಚರಿಸುವ ಡೆಮು ರೈಲು ನಿಗದಿತ ಸಮಯ ಪಾಲನೆ ಮಾಡದೇ ತಡವಾಗಿ ಸಂಚರಿಸುತ್ತಿದೆ. ಇದರಿಂದ ಕಲಬುರಗಿ ಮೂಲಕ ಇತರೆ ರೈಲುಗಳಿಗೆ ತೆರಳುವ ಪ್ರಯಾಣಿಕರು ಸಂಪರ್ಕ ರೈಲುಗಳನ್ನು ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಡೆಮು ರೈಲನ್ನು ಹಿಂದಿನ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಸಂಚರಿಸುವಂತೆ ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಯಿತು.
ಅದೇ ರೀತಿ, ಬೀದರ-ಹೈದರಾಬಾದ್ ಇಂಟರ್‍ಸಿಟಿ ಎಕ್ಸ್‍ಪ್ರೆಸ್ ರೈಲನ್ನು ಹಿಂದಿನಂತೆ ಬೆಳಿಗ್ಗೆ 7 ಗಂಟೆಗೆ ಬೀದರದಿಂದ ನಿರ್ಗಮಿಸುವ ವೇಳಾಪಟ್ಟಿಯನ್ನು ಮರುಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸಂಸದರಿಗೆ ಮನವಿ ಮಾಡಿದರು.
ಈ ಕುರಿತು ಶೀಘ್ರ ಕ್ರಮ ಕೈಗೊಂಡು ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಡಾ. ಬಿ.ಆರ್. ಅಂಬೇಡ್ಕರ್ ಯುತ್ ಬ್ರಿಗೇಡ್ ಆಗ್ರಹಿಸಿದೆ.

































