
ಬೀದರ್, ಆ ೨೬: ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆ ಮತ್ತು ಪೋಷಣೆ ಸಲುವಾಗಿ ಸರಕಾರ ಹಮ್ಮಿಕೊಂಡಿರುವ ಯೋಜನೆಗಳಾದ ಪ್ರಾಯೋಜಕತ್ವ, ವಿಶೇಷ ಪಾಲನಾ ಯೋಜನೆ ಹಾಗೂ ಉಪಕಾರ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬಾಲ್ಯವಿವಾಹ ಕುರಿತು ಚರ್ಚಿಸಿದ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು, ಬಾಲ್ಯವಿವಾಹಕ್ಕೆ ಕಾರಣರಾದ ಪಾಲಕರು, ಪುರೋಹಿತರು, ಕಲ್ಯಾಣ ಮಂಟಪದ ಮುಖ್ಯಸ್ಥರು ಹಾಗೂ ಲಗ್ನ ಪತ್ರಿಕೆ ಮುದ್ರಿಸುವವರ ವಿರುದ್ಧ ದೂರು ದಾಖಲಿಸಬೇಕೆಂದು ಸೂಚಿಸಿದರು.
ಬೀದರ್ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು (ಮಂಗಳವಾರ) “ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ” ಹಾಗೂ ಬಾಲ್ಯವಿವಾಹಗಳನ್ನು ತಡೆಯುವ “ಸಮನ್ವಯ ಮತ್ತು ಪರಿಶೀಲನಾ ಸಮಿತಿ” ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಪುರಸ್ಕೃತ ಯೋಜನೆಯಾದ ಮಕ್ಕಳ ರಕ್ಷಣಾ ಸೇವೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮತ್ತು ಅದರ ಮೇಲ್ವಿಚಾರಣೆ ನಡೆಸಲು “ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ”ಯನ್ನು ಹಾಗೂ ಬಾಲ್ಯವಿವಾಹಗಳನ್ನು ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ “ಸಮನ್ವಯ ಮತ್ತು ಪರಿಶೀಲನಾ ಸಮಿತಿ”ಯನ್ನು ರಚನೆ ಮಾಡಲಾಗಿದೆ ಎಂದರು.
ಚಿAದಿ ಆಯುವ, ಭಿಕ್ಷೆ ಬೇಡುವ ಹಾಗೂ ಬಾಲಕಾರ್ಮಿಕ ಮಕ್ಕಳ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕು. ಪೊಲೀಸ್ ಇಲಾಖೆಯವರು ಸದರಿ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ, ಅಂತಹ ಮಕ್ಕಳು ಎಲ್ಲಿಯೂ ಕಾಣಿಸಿಕೊಳ್ಳದಂತೆ ವೃತ್ತ ಪೊಲೀಸ್ ನಿರೀಕ್ಷಕರು ನೋಡಿಕೊಳ್ಳಬೇಕೆಂದು ತಿಳಿಸಿದರು.
ಬಾಲನ್ಯಾಯ ಮಂಡಳಿ ಮುಂದೆ ಬಂದ ಪ್ರಕರಣಗಳನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಅದರಂತೆ ಪೊಲೀಸ್ ಇಲಾಖೆಯವರಿಗೆ ಸಂವೇದನಾಶೀಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು. ಒಟ್ಟಿನಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಎಲ್ಲಾ ಸಹಭಾಗೀದಾರ ಇಲಾಖೆಯವರು ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಘವೇಂದ್ರ ಉಪಾಧ್ಯೆ, ಬೀದರ್ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾAತ್ ಪೂಜಾರಿ, ಬೀದರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ನವೀನ್, ಬೀದರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶಾರದಾ ಎನ್. ಕಲ್ಮಲಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.































