ಟೈಲರ್ ಅಸೋಸಿಯೇಷನ್‍ನಿಂದ ಅಗಲಿದ ಟೈಲರ್ ಕುಟುಂಬಕ್ಕೆ ಸಾಂತ್ವನ; ಸರ್ಕಾರಕ್ಕೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಆಳಂದ:ಜ.20: ಪಟ್ಟಣದ ಟೈಲರ್ ವಿಜಯ್ ಡೋಯಿಜೋಡೆ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಆಳಂದ ಟೈಲರ್ ಅಸೋಸಿಯೇಷನ್‍ನಿಂದ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ.
ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾಧ್ಯಕ್ಷ ಕಿಶನ್ ರಂಗದ ಅವರು ಮಾತನಾಡಿ, ಬಡ ಕಾರ್ಮಿಕರಾಗಿ ದುಡಿಯುತ್ತಿರುವ ಟೈಲರ್‍ಗಳಿಗೆ ಸರ್ಕಾರ ಸೂಕ್ತ ಸೌಲಭ್ಯಗಳು ಹಾಗೂ ಸಹಾಯಧನ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಲ್ಲಿಸಿದ ಬೇಡಿಕೆಗಳು ಇದುವರೆಗೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾರ್ಮಿಕರಾಗಿರುವ ಟೈಲರ್‍ಗಳಿಗೆ ಪ್ರತಿ ತಿಂಗಳು 5,000 ರೂಪಾಯಿ ಮಾಸಾಶನ ಒದಗಿಸಬೇಕು. ಸರ್ಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ತೀರಾ ಬಡತನದಲ್ಲಿ ಕಾಲ ಕಳೆಯುತ್ತಿರುವ ಟೈಲರ್‍ಗಳಿಗೆ ಕಾಲಘಟ್ಟದಲ್ಲಿ ಸರಿಯಾಗಿ ಕೂಲಿ ದೊರೆಯುತ್ತಿಲ್ಲ. ಕಡಿಮೆ ಕೂಲಿ ದೊರೆತರೂ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಆಕಸ್ಮಿಕವಾಗಿ ಕುಟುಂಬ ಯಜಮಾನನನ್ನು ಕಳೆದುಕೊಂಡರೆ ಕುಟುಂಬ ನಿರ್ವಹಣೆ ಇನ್ನಷ್ಟು ಕಷ್ಟಕರವಾಗುತ್ತದೆ ಎಂದು ಕಿಶನ್ ರಂಗದ ಹೇಳಿದರು.
ಸರ್ಕಾರ ಇವುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಕಾರ್ಮಿಕ ಕಾಯ್ದೆಯ ಸೌಲಭ್ಯಗಳನ್ನು ಟೈಲರ್ ಬಾಂಧವರಿಗೂ ವಿಸ್ತರಿಸಬೇಕು. ಮನೆ ಕಟ್ಟಿಕೊಳ್ಳಲು ಸಾಲ ಸೌಲಭ್ಯ, ಉದ್ಯೋಗಕ್ಕಾಗಿ ಸಹಾಯ, ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯವೇತನ ಹಾಗೂ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಟೇಲರ್ ಸಿದ್ದರಾಮ ದೊಡ್ಡಮನಿ, ದಯಾನಂದ ಕಠಾರೆ, ಕಿರಣ ಡೋಈ ಚೋಡೆ, ಗೋವಿಂದ ಗಡ್ಡಂ, ದತ್ತಾ ಹಿಬಾರೆ, ವಿನೋದ್ ಸೂರೆ ಸೇರಿದಂತೆ ಇನ್ನಿತರ ಮುಖಂಡರು ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಬಂದ 10ಸಾವಿರ ರೂಪಾಯಿ ಸಹಾಯಧನವನ್ನು ವಿತರಿಸಿದರು.