
ಕಲಬುರಗಿ,ಮೇ.26-ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸೇಠ ಶಂಕರ್ ಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ, ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ವತಿಯಿಂದ ಸೋಮವಾರ ‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ -ಪ್ರಜಾಪ್ರಭುತ್ವ ಉಳಿಸಿ ‘ವಿಷಯ ಕುರಿತು ಕಾನೂನು ವಿದ್ಯಾರ್ಥಿಗಳಿಗಾಗಿ ‘ರಾಷ್ಟ್ರೀಯ ವಿಚಾರ ಸಂಕಿರಣ: ವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಡಾ.ಮಹೇಶ್ವರಿ ಎಸ್.ಹಿರೇಮಠ ಉದ್ಘಾಟಿಸಿದರು.
ಅತಿಥಿ ಉಪನ್ಯಾಸಕರಾದ ಪೆÇ್ರ: ನರೇಂದ್ರ ಬಡಶೇಶಿ ಮಾತನಾಡುತ್ತಾ 1990- 96ರ ಅವಧಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ರವರು ದೇಶದಲ್ಲಿ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ಶ್ರಮಿಸಿದ್ದರು. ಭಾರತ ಚುನಾವಣಾ ಆಯೋಗ ಸ್ವತಂತ್ರವಾದ ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗಕ್ಕಿರುವ ಅಧಿಕಾರ ವ್ಯಾಪ್ತಿಯನ್ನು ಟಿ.ಎನ್.ಶೇಷನ್, ರವರ ಅವಧಿಯಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಳನ್ನು ನಡೆಸುವ ಮೂಲಕ ಚುನಾವಣಾ ಆಯೋಗದ ವಿಶೇಷತೆ ಮತ್ತು ಜವಾಬ್ದಾರಿಯನ್ನು ದೇಶದ ಮತದಾರರಿಗೆ ತೋರಿಸಿಕೊಟ್ಟಿದ್ದರು,ಮತ್ತು ಚುನಾವಣಾ ಆಯೋಗದ ಘನತೆಯನ್ನು ಹೆಚ್ಚಿಸಿದ್ದರು .ಪ್ರತಿ ಚುನಾವಣೆ ಬಂದಾಗ ದೇಶದ ಜನತೆ ಟಿ.ಎನ್.ಶೇಷನ್, ರನ್ನು ನೆನಪಿಸಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅತಿಥಿ ಉಪನ್ಯಾಸಕರು ನ್ಯಾಯವಾದಿಗಳಾದ ಸಂಜೀವ ಕುಮಾರ ಮಾತನಾಡುತ್ತಾ ಸಾಕಷ್ಟು ಕಾರ್ಯಕ್ರಮಗಳು ಕೇವಲ ಕಾಟಾಚಾರದ ಕಾರ್ಯಕ್ರಮಗಳಾಗುತ್ತಿವೆ.ಇವತ್ತು ನಾವು ಸಾಕಷ್ಟು ಜನ ಕಾರ್ಯಕ್ರಮಗಳ ವೇದಿಕೆಯಲ್ಲಿ ಮಾತನಾಡುತ್ತೇವೆ. ವೇದಿಕೆಯಲ್ಲಿ ಮಾತನಾಡಿದಂತೆ ನಾವು ನಡೆದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ, ನಾವು ಇಲ್ಲಿರುವ ಪ್ರತಿಯೊಬ್ಬರು ಚುನಾವಣೆಗಳಲ್ಲಿ ಹಣ ಹಂಚಲು ಬಂದವರನ್ನು ತಿರಸ್ಕರಿಸಿದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಮಾಡಿದ್ದಕ್ಕೆ ಸಾರ್ಥಕವಾಗುತ್ತದೆ .ನಮ್ಮ ನಡೆ- ನುಡಿ ಒಂದಾಗದೆ ಹೋದರೆ ಕಾರ್ಯಕ್ರಮಗಳು ಕೇವಲ ಸುದ್ದಿ- ಮಾಧ್ಯಮಗಳಿಗಾಗಿ ಸೀಮಿತವಾಗಿ ಬಿಡುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
‘ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ- ಪ್ರಜಾಪ್ರಭುತ್ವ ಉಳಿಸಿ’ ರಾಷ್ಟ್ರೀಯ ವಿಚಾರ ಸಂಕಿರಣ ದಲ್ಲಿ ಕಾನೂನು ವಿದ್ಯಾರ್ಥಿಗಳಾದ ಮಲ್ಲಿಕಾ, ಪವಿತ್ರಾ, ಶ್ರೀಲಕ್ಷ್ಮಿ, ಆದಿತಿ, ಪೂಜಾ ಮತ್ತು ವಿಜಯಕುಮಾರ ಅತ್ಯುತ್ತಮವಾಗಿ ಮಾತನಾಡಿದ್ದಕ್ಕಾಗಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಸಂಯೋಜಕರು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ನಯನತಾರಾ ಅಸಪಲ್ಲಿ ಮಾತನಾಡುತ್ತಾ, ಅತ್ಯುತ್ತಮವಾಗಿ ಮಾತನಾಡಿದ ಕುರಿತು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಇಂಥ ಅವಕಾಶಗಳು ತಪ್ಪಿಸಿಕೊಳ್ಳಬಾರದು.ತಮಗೆ ಒದಗಿ ಬರುವ ಸದಾವಕಾಶವನ್ನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ, ಇನ್ನು ಹೆಚ್ಚು- ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮುಖಾಂತರ ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ.ಆರ್.ದುತ್ತರಗಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಇವತ್ತು ಮನುಷ್ಯರಲ್ಲಿ ದುರಾಸೆ ಹೆಚ್ಚುತ್ತಿದ್ದು ಇದರಿಂದ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕ ವ್ಯಕ್ತಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇದು ಅಪಾಯಕಾರಿಯಾದ ಬೆಳವಣಿಗೆ, ಇದರಿಂದ ಮುಂದೆ ಸಮಾಜಕ್ಕೆ- ದೇಶಕ್ಕೆ ಅಪಾಯ ಕಾದಿದೆ ಎಂದರು. ಇವತ್ತು ಸಮಾಜದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳ ಕುರಿತು ಹೆಚ್ಚು-ಹೆಚ್ಚು ಚರ್ಚೆ ನಡೆಯಬೇಕಾಗಿದೆ.ಇತ್ತೀಚಿಗೆ ಸರ್ಕಾರದ ಕಾಮಗಾರಿಗಳ ಗುಣಮಟ್ಟ ಕಳಪೆಯಾಗುತ್ತಿರುವುದಕ್ಕೆ,ಅಭ್ಯರ್ಥಿಗಳು ಚುನಾವಣೆಯಲ್ಲಿ ಹೆಚ್ಚು -ಹೆಚ್ಚು ಹಣ ಖರ್ಚು ಮಾಡುತ್ತಿರುವುದೇ, ಪ್ರಮುಖ ಕಾರಣ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು .ನಾನು ಮತದಾರ ಪಟ್ಟಿಯಲ್ಲಿ ತಪ್ಪದೇ ನನ್ನ ಹೆಸರನ್ನು ನೋಂದಾಯಿಸುತ್ತೇನೆ.ನಾನು ಚುನಾವಣೆಗಳಲ್ಲಿ ಯಾವುದೇ ಆಸೆ- ಆಮೀಷಗಳಿಗೆ ಬಲಿಯಾಗದೆ ಮತದಾನ ಮಾಡುತ್ತೇನೆ .ಕ್ರಿಮಿನಲ್ ಆರೋಪ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ನಾನು ಮತ ಹಾಕುವುದಿಲ್ಲ.ಚುನಾವಣೆಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ನನಗೆ ಸರಿ ಎನಿಸದೆ ಇದ್ದಲ್ಲಿ ನಾನು ನೋ ಟಾಕ್ಕಾದರೂ ತಪ್ಪದೆ ಮತದಾನ ಮಾಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ: ಜ್ಯೋತಿ ಕಾಡದಿ ,ಶಾಂತೇಶ್ವರಿ ಶಾಂತಗಿರಿ, ಕರುಣ ಪಾಟೀಲ, ರೇಣುಕಾ ದೇವರಮನಿ ಮತ್ತು ಜ್ಯೋತಿ ಹಂಕರಕಿ ಉಪಸ್ಥಿತರಿದ್ದರು.ಕಾನೂನು ವಿದ್ಯಾರ್ಥಿನಿ ಪವಿತ್ರಾ ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






















