ಸಿರಪ್ ಕಂಪನಿ ಮಾಲೀಕನ ಬಂಧನ

ಚೆನ್ನೈ,ಅ.೯- ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿ ಸಿರಪ್ ತಯಾರಿಕಾ ಕಂಪನಿಯ ಮಾಲೀಕನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.


ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಕನಿಷ್ಠ ೨೧ ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಪ್ ತಯಾರಿಸಿದ ಕಂಪನಿ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲೀಕ ಎಸ್.ರಂಗನಾಥನ್ ಅವರನ್ನು ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಸಂಬಂಧಿಸಿದ್ದಾರೆ.


ಮಧ್ಯಪ್ರದೇಶ ಮತ್ತು ತಮಿಳುನಾಡು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಂಗನಾಥನ್ ಅವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಈತನನ್ನು ವಶಕ್ಕೆ ಪಡೆದಿರುವ ಮಧ್ಯಪ್ರದೇಶದ ಪೊಲೀಸರು ವಿಚಾರಣೆ ನಡೆಸಿದ್ದಾರೆ.


ರಾಜ್ಯದಲ್ಲಿ ವಿಷಕಾರಿ ಸಿರಪ್ ಸೇವಿಸಿ ಸಾವನ್ನಪ್ಪಿದ ಕನಿಷ್ಠ ೨೧ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪೊಲೀಸರು ಕಂಪನಿ ಮಾಲೀಕ ರಂಗನಾಥನ್ ಅವರಿಗಾಗಿ ಶೋಧ ನಡೆಸಿದ್ದರು ಅಲ್ಲದೆ ಅವರ ಸುಳಿವುಕೊಟ್ಟವರಿಗೆ ೨೦,೦೦೦ ರೂ. ಬಹುಮಾನವನ್ನು ಘೋಷಿಸಿದ್ದರು.


ಮಧ್ಯಪ್ರದೇಶದ ಹೊರತಾಗಿ, ರಾಜಸ್ಥಾನದಲ್ಲೂ ಈ ಸಿರಪ್ ಸೇವಿಸಿ ಕೆಲ ಮಕ್ಕಳು ಸಾವನ್ನಪ್ಪಿದರು. ಜೊತೆಗೆ ಮಕ್ಕಳಿಗೆ ಮೂತ್ರಪಿಂಡದ ಸೋಂಕು ಉಂಟಾಗಿ ಹಲವು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ


ಕೋಲ್ಡ್ರಿಫ್ ಎಂಬುದು ಮಕ್ಕಳಲ್ಲಿ ಶೀತ ಮತ್ತು ಕೆಮ್ಮಿನ ಲಕ್ಷಣಗಳನ್ನು ನಿವಾರಿಸಲು ಸೂಚಿಸಲಾದ ಔಷಧಿಯಾಗಿದೆ, ಉದಾಹರಣೆಗೆ ಮೂಗು ಸೋರುವುದು, ಸೀನುವುದು, ಗಂಟಲು ನೋವು ಮತ್ತು ಕಣ್ಣುಗಳಲ್ಲಿ ನೀರು ಬರುವುದು ಈ ರೀತಿಯ ಕಾಯಿಲೆಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ.


ಈ ತಿಂಗಳ ಆರಂಭದಲ್ಲಿ, ಸಿರಪ್ ಅನ್ನು ಪರೀಕ್ಷೆಗೆ ಒಳಪಡಿಸಿ ವಿಷಕಾರಿ ಮತ್ತು ಹಾನಿಕಾರಕ ರಾಸಾಯನಿಕ ಡೈಥಿಲೀನ್ ಗ್ಲೈಕಾಲ್ ಇರುವಿಕೆಯನ್ನು ತಮಿಳುನಾಡು ಅಧಿಕಾರಿಗಳು ಪತ್ತೆ ಮಾಡಿ ಸಿರಪ್ ಅನ್ನು ಕಲಬೆರಕೆ ಎಂದು ಘೋಷಿಸಿದ್ದರು,


ಭಾರತದ ಉನ್ನತ ಔಷಧ ನಿಯಂತ್ರಕ ಔಷಧೀಯ ಉತ್ಪಾದನಾ ಪದ್ಧತಿಗಳಲ್ಲಿ ಗಂಭೀರ ಲೋಪ ಒಪ್ಪಿಕೊಂಡಿದೆ. ಹಲವಾರು ಕಾರ್ಖಾನೆಗಳ ತಪಾಸಣೆಯಲ್ಲಿ ಕಂಪನಿಗಳು ಅಗತ್ಯಕ್ಕೆ ಅನುಸಾರವಾಗಿ ಪ್ರತಿಯೊಂದು ಬ್ಯಾಚ್ ಕಚ್ಚಾ ವಸ್ತುಗಳು ಮತ್ತು ಸಕ್ರಿಯ ಪದಾರ್ಥಗಳನ್ನು ಪರೀಕ್ಷಿಸುತ್ತಿಲ್ಲ ಎಂದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮೃತರ ಸಂಖ್ಯೆ ೨೧ಕ್ಕೆ ಏರಿಕೆ


ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ೨೧ಕ್ಕೆ ಏರಿಕೆಯಾಗಿದೆ, ಜೊತೆಗೆ ಸಿರಪ್ ಸೇವಿಸಿ ಹಲವು ಮಕ್ಕಳು ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ರಾಜಸ್ತಾನದಲ್ಲಿಯೂ ಸಿರಪ್ ಸೇವಿಸಿ ಹಲವು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸಿರಪ್ ನಿಷೇಧಿಸಲಾಗಿದೆ.

ಔಷಧ ಕಂಪನಿ ಶಾಶ್ವತ ಬಂದ್


ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವಿಸಿ ೨೧ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪಿಸಿದ ಹಿನ್ನೆಲೆಯಲ್ಲಿ ಔಷಧಿ ತಯಾರಕರಾದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ನ ಮಾಲೀಕ ರಂಗನಾಥನ್ ಬಂಧಿಸಿದ ಬೆನ್ನಲ್ಲೇ ಔಷಧ ಕಂಪನಿಯನ್ನು ಶಾಶ್ವತವಾಗಿ ಮುಚ್ಚಿ ಆದೇಶಿಸಲಾಗಿದೆ.


ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕನಿಷ್ಠ ೨೧ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನ ಬಂಧನದ ಬೆನ್ನಲ್ಲೇ ಸಿರಪ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಕೈಗಾರಿಕಾ ರಾಸಾಯನಿಕ ಡೈಥಿಲೀನ್ ಗ್ಲೈಕೋಲ್ ಇರುವುದು ಕಂಡುಬಂದ ನಂತರ. ಕಂಪನಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.


ಪ್ರಾಥಮಿಕ ತನಿಖೆಯಲ್ಲಿ ಮಧ್ಯಪ್ರದೇಶ ಹೊರತುಪಡಿಸಿ ಒಡಿಶಾ ಮತ್ತು ಪುದುಚೇರಿಗೆ ಕೆಮ್ಮಿನ ಸಿರಪ್ ಸರಬರಾಜು ಮಾಡಲಾಗಿದೆ ಎಂದು ತಿಳಿದುಬಂದಿದೆ.


ಕಾಂಚೀಪುರಂನಲ್ಲಿರುವ ಔಷಧ ಕಂಪನಿಯ ಕಾರ್ಖಾನೆಯಲ್ಲಿ, ಕೋಲ್ಡ್ರಿಫ್ ಸಿರಪ್ ತಯಾರಿಕೆಯ ವೇಲೆ ವಿಷಕಾರಿ ರಾಸಾಯನಿಕ ಪತ್ತೆಯಾದ ನಂತರ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಔಷಧದ ಉತ್ಪಾದನಾ ಪರವಾನಗಿ ರದ್ದುಗೊಳಿಸುವಂತೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸೂಚಿಸಿತ್ತು, ಇದರ ಬೆನ್ನಲ್ಲೇ ಕಂಪನಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ


ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯ ೨೬ ಪುಟಗಳ ವರದಿಯಲ್ಲಿ ಕಾನ್ಸಿಪುರದ ಫಾರ್ಮಾ ಕಾರ್ಖಾನೆಯಲ್ಲಿ ಕೆಮ್ಮಿನ ಸಿರಪ್ ತಯಾರಿಸಲಾದ ಅನೈರ್ಮಲ್ಯ ಪರಿಸ್ಥಿತಿ ಬಹಿರಂಗಪಡಿಸಿದೆ. ರಾಜ್ಯ ಔಷಧ ನಿಯಂತ್ರಕ ಸಂಸ್ಥೆ ಗುರುತಿಸಿರುವ ೩೫೦ ಉಲ್ಲಂಘನೆಗಳಲ್ಲಿ ತುಕ್ಕು ಹಿಡಿದ ಉಪಕರಣಗಳು ಮತ್ತು ಔಷಧೇತರ ದರ್ಜೆಯ ರಾಸಾಯನಿಕಗಳ ಅಕ್ರಮ ಬಳಕೆ ಸೇರಿವೆ.


ತಮಿಳುನಾಡು ನಿಯಂತ್ರಕ ಸಂಸ್ಥೆಯು ನಡೆಸಿದ ತಪಾಸಣೆಯಲ್ಲಿ ಕೈಗಾರಿಕಾ ದ್ರವದ ಶೇಕಡಾ ೪೮ರಷ್ಟು ವರೆಗೆ ಸೇರಿಸಲ್ಪಟ್ಟಿದೆ ಎಂದು ಕಂಡುಬಂದಿದೆ, ಅನುಮತಿಸಲಾದ ಮಿತಿ ಕೇವಲ ೦.೧ ಪ್ರತಿಶತವಾಗಿದ್ದರೂ ಸಹ ಉತ್ತಮ ಉತ್ಪಾದನಾ ಅಭ್ಯಾಸಗಳ ಪ್ರಮಾಣೀಕರಣದ ಕೊರತೆಯಿದ್ದರೂ, ರಂಗನಾಥನ್ ಅವರ ಕಂಪನಿಯು ಜೆನೆರಿಕ್ ಔಷಧ ತಯಾರಿಸುವುದು ಮತ್ತು ಮಾರಾಟ ಮಾಡುವುದನ್ನು ಮುಂದುವರೆಸಿತ್ತು ಎನ್ನುವ ಸಂಗತಿ ಬಯಲಾಗಿದೆ.